ಸವದತ್ತಿಯಲ್ಲಿ ನೀರಿನ ಹಾಹಾಕಾರ: ಮಲಪ್ರಭೆ ನದಿ ಪಕ್ಕದಲ್ಲಿದ್ದರೂ ಬಾಯಾರಿಕೆ ನೀಗದ ಬದುಕು

ಸವದತ್ತಿಯಲ್ಲಿ ನೀರಿನ ಹಾಹಾಕಾರ: ಮಲಪ್ರಭೆ ನದಿ ಪಕ್ಕದಲ್ಲಿದ್ದರೂ ಬಾಯಾರಿಕೆ ನೀಗದ ಬದುಕು  Water scarcity in Savadatti: Life is thirsty despite being next to the Malaprabhe River

ಸವದತ್ತಿ 11: ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದಂತೆಯೇ ಐತಿಹಾಸಿಕ ಸವದತ್ತಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಪಕ್ಕದಲ್ಲೇ ಮಲಪ್ರಭಾ ನದಿ ಹರಿಯುತ್ತಿದ್ದರೂ ಅತೀ ಸಮೀಪದಲ್ಲೇ ಸಾಗರದಂತಹ ಜಲರಾಶಿ ಇದ್ದರೂ ನದಿ ಮೂಲವಿದ್ದೂ ತೃಷೆ ನೀಗದ ಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ.  

ನಗರದ ರಾಮಾಪೂರಸೈಟ್, ಇನಾಮತಿ ಪ್ಲಾಟ್, ಗುರು ನಗರ, ಹುಂಡನವರ ಓಣಿ, ಸೇರಿದಂತೆ ಹಲವಾರು ವಾರ್ಡ್‌ಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ. ಅದರಲ್ಲೂ ನೂರಾನಿ ನಗರದ ನಿವಾಸಿಗಳ ಸ್ಥಿತಿಯಂತೂ ಹೇಳತೀರದಾಗಿದೆ. ಹನಿ ನೀರಿಗೂ ಪರದಾಡುವಂತಾಗಿದ್ದು, ಕುಡಿಯುವ ನೀರಿನ ಹಾಹಾಕಾರ ಮನೆಮಾಡಿದೆ.  

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಸವದತ್ತಿ ನಗರಸಭೆ ಸಹಯೋಗದಲ್ಲಿ 10.50 ಎಮ್‌.ಎಲ್‌.ಡಿ. ಸಾಮರ್ಥ್ಯದ ಬೃಹತ್ ನೀರು ಶುದ್ದೀಕರಣ ಘಟಕವನ್ನು ನಿರ್ಮಿಸಲಾಗಿದೆ. ನಗರಕ್ಕೆ ನಿರಂತರ ನೀರು ಒದಗಿಸುವ ಉದ್ದೇಶದ ಈ ಯೋಜನೆ, ನಿರ್ವಹಣೆಯ ಕೊರತೆಯಿಂದಾಗಿ ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದೆ ಎಂಬುದು ಸಾರ್ವಜನಿಕರ ಪ್ರಬಲ ಆರೋಪವಾಗಿದೆ.

ನಮ್ಮ ಪಕ್ಕದಲ್ಲೇ ನದಿ ಹರಿಯುತ್ತಿದೆ, ಆದರೆ ನಮ್ಮ ಮನೆಯ ನಲ್ಲಿಗಳಲ್ಲಿ ನೀರಿಲ್ಲ. ಅಧಿಕಾರಿಗಳ ಉದಾಸೀನತೆಯಿಂದಾಗಿ ನಾವು ನೀರಿಗಾಗಿ ಅಲೆಯುವಂತಾಗಿದೆ. ನದಿ ಸಮೀಪದಲ್ಲೇ ಇದ್ದರೂ ಸಮರ​‍್ಕ ಪಂಪಿಂಗ್ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಹಿನ್ನಡೆಯಾಗಿದೆ. ಅಧಿಕಾರಿಗಳ ಉದಾಸೀನತೆಯಿಂದಾಗಿ  5 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಸದ್ಯ ಅನಿವಾರ್ಯತೆ ಇರುವ ಕಡೆ ಖಾಸಗಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಆದರೆ ಇದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಶಾಶ್ವತ ಪರಿಹಾರವಲ್ಲ ಎಂಬುದು ಜನರವಾದ.  

ಸ್ಥಳೀಯ ಶಾಸಕ ವಿಶ್ವಾಸ ವೈದ್ಯ  ಹಾಗೂ ತಾಲ್ಲೂಕು ಆಡಳಿತವು ಈ ಕೂಡಲೇ ಮಧ್ಯಪ್ರವೇಶಿಸಬೇಕು. ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಪಂಪಿಂಗ್ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಸಾರ್ವಜನಿಕರಿಗೆ ನಿರಂತರವಾಗಿ ನೀರು ಪೂರೈಕೆ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.  

ಪ್ರತಿ ಬೇಸಿಗೆಯಲ್ಲಿ ಮರುಕಳಿಸುವ ಈ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆಯು ಶಾಶ್ವತ ಮುಕ್ತಿ ನೀಡಬೇಕಿದೆ. ಸವದತ್ತಿಯ ಜನರು ಬಿಸಿಲ ಬೇಗೆಯ ಜೊತೆಗೆ ನೀರಿನ ಬವನೆಯಲ್ಲೂ ಬೇಯುತ್ತಿದ್ದಾರೆ. ಇನ್ನಾದರೂ ಆಡಳಿತ ಯಂತ್ರ ಎಚ್ಚೆತ್ತುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತದೆಯೇ ಎಂದು ಕಾದು ನೋಡಬೇಕಿದೆ.