ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಬಿಡುಗಡೆ: ರೈತರ ಮೊಗದಲ್ಲಿ ಮಂದಹಾಸ

ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಬಿಡುಗಡೆ: ರೈತರ ಮೊಗದಲ್ಲಿ ಮಂದಹಾಸ  Water released into Mulwad lift irrigation canals: Smiles on farmers' faces.

ಮಟ್ಟಿಹಾಳ: ರೈತರ ಹೋರಾಟಕ್ಕೆ ಮಣಿದ ಅಧಿಕಾರಿಗಳು 

ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಬಿಡುಗಡೆ: ರೈತರ ಮೊಗದಲ್ಲಿ ಮಂದಹಾಸ  

ಕೊಲ್ಹಾರ 16: ಮುಳವಾಡ ಸೇರಿದಂತೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಎಲ್ಲ ಏತ ನೀರಾವರಿ ಯೋಜನೆಗಳ ಕಾಲುವೆಗಳಿಗೆ ನೀರು ಬಿಡುಗಡೆ ಮಾಡದೇ ವಿಳಂಬ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಮಾಜಿ ಸಚಿವ ಎಸ್‌.ಕೆ. ಬೆಳ್ಳೂಬ್ಬಿ ನೇತೃತ್ವದಲ್ಲಿ ರೈತರು ಬುಧವಾರ ತಾಲೂಕಿನ ಮಟ್ಟಿಹಾಳ ಕ್ರಾಸ್‌ನ ಕೆಬಿಜೆಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.  

ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಎಲ್ಲ ಏತ ನೀರಾವರಿ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ರೈತರು ಒತ್ತಾಯಿಸಿದರು.  

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್‌.ಕೆ. ಬೆಳ್ಳೂಬ್ಬಿ, ಮುಂಗಾರು ಮಳೆ ಸಮರ​‍್ಕವಾಗಿ ಆಗದಿರುವುದು, ಕೃಷ್ಣಾ ನದಿಗೆ ತಡವಾಗಿ ನೀರು ಹರಿದು ಬಂದಿರುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಳವಾಡ ಸೇರಿದಂತೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಎಲ್ಲ ಏತ ನೀರಾವರಿ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.  

ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಈ ಭಾಗದ ರೈತರು ತಮ್ಮ ಜಮೀನು ಹಾಗೂ ಮನೆಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ಏತ ನೀರಾವರಿ ಯೋಜನೆಗಳನ್ನು ಅವಳಿ ಜಿಲ್ಲೆಗಳ ನೀರು ನಿರ್ವಹಣಾ ಸಲಹಾ ಸಮಿತಿ (ಐಸಿಸಿ) ವ್ಯಾಪ್ತಿಗೆ ಒಳಪಡಿಸದೆ, ಮಹಾಪೂರದ ನೀರು ಬಂದ ತಕ್ಷಣವೇ ಕಾಲುವೆಗಳಿಗೆ ನೀರು ಹರಿಸುವ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.  

ಜುಲೈ 9ರಂದು ಸರ್ಕಾರಕ್ಕೆ ಪತ್ರ ಬರೆದು ನೀರು ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.  

ಟಿ.ಟಿ. ಹಗಿದಾಳ್ ಮಾತನಾಡಿ, ಮುಂಗಾರು ಮಳೆಯ ಕೊರತೆಯಿಂದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ-ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಆಲಮಟ್ಟಿ ಜಲಾಶಯದಲ್ಲಿ ಸುಮಾರು 95 ಟಿಎಂಸಿ ನೀರು ಸಂಗ್ರಹವಿರುವುದರಿಂದ ರೈತರ ಹಿತದೃಷ್ಟಿಯಿಂದ ಮುಳವಾಡ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಎಲ್ಲ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.  

ರೈತರ ಪ್ರತಿಭಟನೆಗೆ ಎಚ್ಚೆತ್ತ ಅಧಿಕಾರಿಗಳು ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದರು. ಕಾಲುವೆಯಲ್ಲಿ ನೀರು ಹರಿಯತೊಡಗುತ್ತಿದ್ದಂತೆ ರೈತರು ಸಂತಸ ವ್ಯಕ್ತಪಡಿಸಿ, ಹೋರಾಟವನ್ನು ಹಿಂಪಡೆದರು.  

ಪ್ರತಿಭಟನೆಯಲ್ಲಿ ನಂದಬಸಪ್ಪ ಚೌಧರಿ, ಜಿ.ಡಿ. ಅಂಗಡಿ (ಬಿಜೆಪಿ ಜಿಲ್ಲಾ ಅಧ್ಯಕ್ಷ), ಡಿ.ಜಿ. ಬಿರಾದಾರ್ (ವಕೀಲರ ಸಂಘದ ಅಧ್ಯಕ್ಷ), ಹನುಮಂತಗೌಡ ಕುಬಕಡ್ಡಿ, ಇಸ್ಮಾಯಿಲ್ ತಹಶೀಲ್ದಾರ್, ಮಾಳಪ್ಪ ಗುಣದಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು.