ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ

ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ Warning of defamation suit against MLA

ವಿಜಯಪುರ 08:  ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂದು ಮಾಧ್ಯಮ ಹೇಳಿಕೆಯನ್ನು ನೀಡುತ್ತಾ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಹೋರಾಟಗಾರರನ್ನು ಉದ್ದೇಶಿಸಿ ಕೇವಲವಾಗಿ ಮಾತನಾಡುತ್ತಾ, ಇವರೆಲ್ಲರೂ ಸಚಿವರಾದ ಶಿವಾನಂದ್ ಪಾಟೀಲ್ ಅವರ ಕುಮುಕ್ಕಿನಿಂದ ಧರಣಿ ಕುಳಿತಿದ್ದು, ಇವರೆಲ್ಲ ಪೆಮೆಂಟ್ ಗಿರಾಕಿಗಳು. ಬೆಳಿಗ್ಗೆಯಿಂದ  ಕುಳಿತುಕೊಂಡು ಸಂಜೆ ಆಗುತ್ತಿದ್ದಂತೆ ಪೇಮೆಂಟ್ ಪಡೆದುಕೊಳ್ಳಲು ಸಚಿವ ಶಿವನಂದ್ ಪಾಟೀಲ್ ಅವರ ಮನೆಗೆ ದೌಡಾಯಿಸುತ್ತಾರೆ. ಇವರೇನೂ ನಿಜವಾದ ಹೋರಾಟಗಾರನಾ ಅಂತಾ ಹಿಯಾಲಿಸಿ ಮಾತನಾಡಿರುವುದು ಧರಣಿ ನಿರತರಿಗೆ ನೋವು ಉಂಟಾಗಿದೆ.  

ಕಳೆದ 82 ದಿನಗಳಿಂದ ಜಿಲ್ಲೆಗೆ ನ್ಯಾಯಯುತವಾಗಿ ದೊರಕಬೇಕಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ದೊರಯದೇ ಇರುವುದನ್ನು ಖಂಡಿಸಿ ತಮ್ಮ ಮನೆ ಮಠಗಳನ್ನು ಬಿಟ್ಟು ಜಿಲ್ಲೆಗೆ ನ್ಯಾಯ ದೊರಕಿಸುವ ಸದುದ್ದೇಶದಿಂದ ಹೋರಾಟವನ್ನು ನಿರಂತರವಾಗಿ ಸಾಗಿಸಿಕೊಂಡು ಬರುತ್ತಿದ್ದೇವೆ. ಈ ಹೋರಾಟವನ್ನು ಅರಗಿಸಿಕೊಳ್ಳಲು ಆಗದೇ ಇರುವಂತ ಸಚಿವರುಗಳು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ಸಂಸದರು ಈ ಜಿಲ್ಲೆಗೆ ಅನ್ಯಾಯ ಮಾಡುತ್ತಿರುವುದು ಜನತೆ ಗಮನಿಸುತ್ತಿದೆ. ಈ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ನಮ್ಮ ಹೋರಾಟಕ್ಕೆ ಮೆಚ್ಚಿ ತಮ್ಮ ಕೈಲಾದ ಮಟ್ಟಿಗೆ ತನು ಮನ ಧನ ದಿಂದ ಸಹಾಯ ಸಹಕಾರ ನೀಡಿ ಈ ಧರಣಿಯನ್ನು ಬೆಂಬಲಿಸುತ್ತಿದ್ದಾರೆ. ಈ ವಿಷಯ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಿಗೆ ತಿಳಿಯದೆ ಇರುವ ವಿಷಯ. ಇಂದು ನಗರ ಶಾಸಕರು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ.

ಇಲ್ಲಿ ಈ ಹೋರಾಟದಲ್ಲಿ ಪಾಲ್ಗೊಂಡಿರುವ ಯಾರಾದರೂ ಒಬ್ಬರು ಸಚಿವರಿಂದ ಯಾವಾದಾದರೂ ಒಂದು ಹಣಕಾಸಿನ ನೆರವು ಪಡೆದುಕೊಂಡು ಬಂದಿದ್ದರೆ ಮಾನ್ಯ ಶಾಸಕರು ಸಾಕ್ಷಿ ಸಮೇತ ಬಹಿರಂಗವಾಗಿ ಸಾಬೀತು ಪಡಿಸಲಿ. ಒಂದು ವೇಳೆ ಸಾಬೀತು ಪಡಿಸುವಲ್ಲಿ ವಿಫಲರಾದರೆ ಧರಣಿ ನಿರತ ಹೋರಾಟಗಾರರ ಮತ್ತು ಜಿಲ್ಲೆಯ ಜನತೆಯ ಕ್ಷಮೆಯಾಚಿಸಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇದೆ ರೀತಿ ತಮ್ಮ ದುಂಡಾವರ್ತನೆ ಮುಂದುವರಿಸಿದ್ದೆ ಆದರೇ ನಮ್ಮ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಪರವಾಗಿ ಉಚ್ಚನ್ಯಾಯಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಹೋರಾಟಗಾರರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.  

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸದಸ್ಯರಾದ ಅರವಿಂದ್ ಕುಲಕರ್ಣಿ, ಅನಿಲ್ ಹೊಸಮನಿ, ಸುರೇಶ್ ಬಿಜಾಪುರ, ಲಕ್ಷ್ಮಣ್ ಕಂಬಾಗಿ, ಭೋಗೇಶ್ ಸೋಲಾಪುರ್, ಡಾ. ಗುರಿಕರ್, ನೀಲಂಬಿಕಾ ಬಿರಾದಾರ, ಚಿದಾನಂದ್ ಅವಟಿ, ಮಲ್ಲಿಕಾರ್ಜುನ್ ಬಗಲಿ, ಲಿಂಗರಾಜ ಬಿದರಕುಂದಿ, ಸಲಿಂ ಹೊಕ್ರನಿ, ಸುಶೀಲಾ ಮಿನಜಗಿ, ಜ್ಯೋತಿ ಮಿನಜಗಿ, ರಮೇಶ್ ದೊಡ್ಡಮನಿ, ಸಿ.ಬಿ.ಪಾಟೀಲ್, ಸಿದ್ದರಾಮ್ ಹಳ್ಳುರ್ ಮತ್ತಿತರರು ಉಪಸ್ಥಿತರಿದ್ದರು.