ಕಲಬುರಗಿ, ಫೆ 29 : ಪ್ರಚೋದನಾಕಾರಿ ಭಾಷಣ ಮಾಡಿದ್ದ ಮಹಾರಾಷ್ಟ್ರ ಎಐಎಂಎಂ ಮಾಜಿ ಶಾಸಕ ವಾರಿಶ್ ಪಠಾಣ
ಕಾರಣಾಂತರಗಳಿಂದ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಪೊಲೀಸರಿಗೆ ತಿಳಿಸಿರುವ ಮಾಹಿತಿ ಲಭ್ಯವಾಗಿದೆ.
ಪ್ರಚೋದನಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ವಾರಿಶ್ ಪಠಾಣ್ ವಿರುದ್ಧ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು.
ಫೆ.29 ರಂದು ಖುದ್ದಾಗಿ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ವಾರಿಶ್ ತಿಳಿಸಿದ್ದರು. ಆದರೆ, ಸದ್ಯ ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಕೆಲ ದಿನಗಳ ನಂತರ ವಿಚಾರಣೆಗೆ ಹಾಜರಾಗುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಹೀಗಾಗಿ ಕೆಲದಿನಗಳ ನಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ತಿಂಗಳ 15ರಂದು ಕಲಬುರಗಿ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ಸಿಎಎ, ಎನ್ ಆರ್ ಸಿ ವಿರೋಧಿ ಸಭೆಯಲ್ಲಿ ವಾರಿಶ್ ಪಠಾಣ್, 15 ಕೋಟಿ ಮುಸ್ಲಿಮರು 100 ಕೋಟಿ ಹಿಂದೂಗಳ ಮೇಲೆ ಭಾರಿ ಪ್ರಭಾವ ಬೀರಲಿದ್ದಾರೆ ಎಂದು ಪ್ರಚೋದಾನಾತ್ಮಕ ಭಾಷಣ ನೀಡಿದ್ದರು.