ಮಂಗಳೂರು, ಫೆ 6,ಒಳ್ಳೆಯ ಗುಣ ನಡೆತ , ಶೀಲ , ಮೌಲ್ಯವನ್ನು ನೀಡುವಂತ ಶಿಕ್ಷಣವೇ ಶ್ರೇಷ್ಠ ಶಿಕ್ಷಣ. ಇಂತಹ ಶಿಕ್ಷಣವನ್ನು ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜು ಕಲ್ಪಿಸಿದ್ದು, ಮುಂದೆಯೂ ಈ ಸಂಸ್ಥೆ ತನ್ನ ಪರಂಪರೆಯನ್ನು ಮುಂದುವರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ 150 ವರ್ಷಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯ ಕಾಲೇಜು ಶ್ರೇಷ್ಠ ಶಿಕ್ಷಣ ಪರಂಪರೆಯ ಯನ್ನು ಕಟ್ಟಿಕೊಟ್ಟ ಸಂಸ್ಥೆಯಾಗಿದೆ. ಮೇಧಾವಿ ಶಿಕ್ಷಕರನ್ನು ರೂಪಿಸಿದ ಈ ಕಾಲೇಜು ಸಹಸ್ರಾರು ಸಾಧಕ ವಿದ್ಯಾರ್ಥಿಗಳನ್ನು ನಾಡಿಗೆ ನೀಡಿದೆ ಎಂದು ಹೇಳಿದರು.ಅಂಚೆ ಇಲಾಖೆಯು ವಿಶ್ವವಿದ್ಯಾನಿಲಯ ಕಾಲೇಜಿನ 150 ನೇ ವರ್ಷಾಚರಣೆ ಪ್ರಯುಕ್ತ ಹೊರತಂದ ವಿಶೇಷ ಅಂಚೆ ಚೀಟಿಯನ್ನು ವೀರಪ್ಪ ಮೊಯ್ಲಿ ಅವರು ಬಿಡುಗಡೆ ಮಾಡಿದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ, ಮಾಹಿತಿ ನೀಡುವುದಷ್ಟೇ ಶಿಕ್ಷಣವಲ್ಲ , ಜ್ಞಾನ ಪರಂಪರೆ ಕಟ್ಟಿಕೊಡುವುದೇ ನಿಜವಾದ ಶಿಕ್ಷಣ. ಈ ನಿಟ್ಟಿನಲ್ಲಿ ಕಾಲೇಜಿನ ಸಾಧನೆ ಅನನ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ.ಕುಲಪತಿ ಪ್ರೋ. ಪಿ.ಎಸ್.ಯಡಪಡಿತ್ತಾಯ ಮಾತನಾಡಿ, ಈ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಔನತ್ಯ ಸಾಧಿಸುವ ನಿಟ್ಟಿನಲ್ಲಿ ಸರ್ವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೊಸ ಕಾಲದ ಬೇಡಿಕೆಗೆ ಶಿಕ್ಷಣದಲ್ಲಿ ಹೊಸತನವನ್ನು ಮೂಡಿಸಿಕೊಂಡು ಕಾಲೇಜು ಮುಂದುವರಿದಿದೆ ಎಂದು ಹೇಳಿದರು.ಶಾಸಕರಾದ ಯು.ಟಿ.ಖಾದರ್ , ಐವನ್ ಡಿಸೋಜಾ, ರಾಜ್ಯ ಅಂಚೆ ಅಧೀಕ್ಷಕ ಚಾರ್ಲ್ಸ್ ಲೋಬೋ , ಪುರಾತತ್ವ ಇಲಾಖೆಯ ನಿರ್ದೇಶಕ ಶಿವಕಾಂತ್ ಬಾಜಪೇಯಿ , ಕರ್ನಲ್ ಶರತ್ ಭಂಡಾರಿ, ಡಾ.ರಾಮಕೃಷ್ಣ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಸ್ವಾಗತಿಸಿದರು, ಪ್ರೋ.ಜಯವಂತ ನಾಯಕ್ ವಂದಿಸಿದರು.