ಮುಂಜಾನೆ ಸೂರ್ಯ ನೆತ್ತಿಗೆ ಬಂದು ಅಲಾರಾಮ್ ಬಡಿದುಕೊಂಡರೂ ಅಯ್ಯೋ ಇಷ್ಟು ಬೇಗ ಬೆಳಗಾಯಿತಲ್ಲ ಎಂದು ಬೇಸರಿಸಿ ಮತ್ತೆ ಮುಸುಕು ಹೊದ್ದು ಮಲಗುವ ಸಾಕಷ್ಟು ಜನರಿದ್ದಾರೆ. ಇದೇ ಚಿತ್ರಣ ಸಿನೆಮಾ ಅಥವಾ ಧಾರಾವಾಹಿಗಳಲ್ಲಿ ನೋಡಿದಾಗ ಆಹಾ ಎಷ್ಟು ಸುಖ ಎನ್ನಿಸುವುದು. ನಿತ್ಯ ಜೀವನಕ್ಕೆ ಅದನ್ನು ತಂದುಕೊಂಡಾಗಲೂ ನಮಗೆ ಸುಖ ಎಂದೆ ಎನ್ನಿಸುವುದು. ಮುಂಜಾನೆ ಚಳಿಯಲ್ಲೋ ಕೂರ್ಗಾಳಿಯಲ್ಲೋ ನಿಲ್ಲದೇ ಯಾವುದೇ ಕೆಲಸ ಎನ್ನವುದನ್ನು ಮಾಡದೇ ಆರಾಮದಾಯಕವಾಗಿ ಹಾಸಿಗೆಯಲ್ಲಿ ಉರಳಾಡಿಕೊಂಡು ಮಲಗುವುದು ಯಾರಿಗೆ ತಾನೆ ಸುಖ ನೀಡುವುದಿಲ್ಲ. ಅದರಲ್ಲೂ ಆಂಡ್ರಯ್ಡ್ ಮೊಬೈಲ್ ಬಂದ ನಂತರವಂತೂ ಮಧ್ಯರಾತ್ರಿ ಕಳೆದರೂ ಅದರಲ್ಲೇ ಮುಳುಗಿದ್ದು ನಿದ್ದೆ ಸಾಲದು ಎಂದು ಬೆಳಗ್ಗೆ ತಡವಾಗಿ ಏಳುವುದು ಸಾಮಾನ್ಯ ಎನ್ನುವಂತಾಗಿದೆ.
ಜನರಿಗೆ ಎಲ್ಲ ಕಡೆಯಲ್ಲೂ ಸುಖ ಮತ್ತು ಸೌಲಭ್ಯಗಳು ಕೈಗೆಟಕುವಂತೆ ಇರಬೇಕು. ಅದಕ್ಕಾಗಿ ಮಾತ್ರ ಈಗ ಕೆಲಸವನ್ನು ಮಾಡುವುದು.. ದೇಹದ ಆರೋಗ್ಯ ಮತ್ತು ಮನಶ್ಯಾಂತಿ ಎನ್ನುವುದು ನಂತರದ ವಿಷಯವಾಗಿ ಬಿಟ್ಟಿದೆ. ಇವೆರಡು ಯಾವಾಗ ಬೇಕು ಎನ್ನಿಸುವುದು ಎಂದರೆ ದುಡಿದು ಸಂಪಾದಿಸಿ ಅದರಿಂದ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಹೋದ ನಂತರ ನಾವು ಆರೋಗ್ಯದ ಕಡೆ ಗಮನ ಹರಿಸಲಿಲ್ಲ, ನಮಶ್ಯಾಂತಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಿಲ್ಲ ಎನ್ನಿಸಲು ಆರಂಭವಾಗುತ್ತದೆ. ಅಲ್ಲಿಯವರೆಗೂ ದುಡಿಮೆ, ಹಣ ಎಂದು ಸರಿಯಾದ ನಿದ್ರೆ ಇಲ್ಲದೆ, ಆರೋಗ್ಯಕ್ಕಾಗಿ ಒಂದಷ್ಟು ನಡಿಗೆ ಇಲ್ಲದೆ, ಹೊಟ್ಟೆ ಹಸಿವಿಗೆ ಸರಿಯಾದ ಊಟವಿಲ್ಲದೇ ಓಡುತ್ತಿರುತ್ತಾರೆ.
ಮನುಷ್ಯನಿಗೆ ಮೂರು ಮುಖ್ಯವಾದ ವ್ಯವಸ್ಥೆ ಬೇಕು ಒಂದು ನಂಬಿಕೆ, ಎರಡನೇಯದು ವಿದ್ಯೆ, ಮೂರನೇಯದು ವಿನಯ. ಇವು ಮನುಷ್ಯನಿಗೆ ಗೌರವವನ್ನು ತಂದುಕೊಡುತ್ತದೆ. ಅದರಂತೆ ಮನುಷ್ಯನ ಜೀವನ ಶೈಲಿಗೂ ಮೂರು ವ್ಯವಸ್ಥೆ ಬೇಕು. ಆಹಾರ, ನಿದ್ರೆ, ಮತ್ತು ಆರೋಗ್ಯ. ಈ ಮೂರಿದ್ದರೆ ಮನುಷ್ಯ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಏನು ಬೇಕಾದರೂ ಎದುರಿಸಿ ಬದುಕಿಬಿಡಬಲ್ಲ.
ನಿದ್ರೆ ಅಥವಾ ಊಟ ಅಥವಾ ದೇಹಕ್ಕೆ ಸಂಬಂಧಿಸಿದಂತೆ ಓಡಾಟ ಒಂದು ವಾರದವರೆಗೆ ಸರಿಯಾಗಿ ಮಾಡದೆ ಇದ್ದರೆ ಏನಾಗುವುದು. ಏನೂ ಆಗುವುದಿಲ್ಲ. ಆ ಕ್ಷಣಕ್ಕೆ ಯಾವುದೋ ಒಂದು ವ್ಯವಸ್ಥೆ ಅದನ್ನೆಲ್ಲ ತಡೆದಿರುತ್ತದೆ. ಹಾಗಾಗಿ ತಟಸ್ಥ ಎನ್ನಿಸುವುದು. ಈ ವಾರ ಹೋಗಿ ವರ್ಷವೋ ಹತ್ತು ವರ್ಷವೋ ಕಳೆದರೆ ಏನಾಗುವುದು. ತಕ್ಷಣ ಏನೂ ಅನ್ನಿಸದಿದ್ದರೂ ಕ್ರಮೇಣ ಅವನ ದೇಹದಲ್ಲಿ ಏರುಪೇರುಗಳು ಕಾಣಿಸಲಾರಂಭಿಸುತ್ತವೆ. ದೇಹದಲ್ಲಿ ಅಡ್ಡ ಪರಿಣಾಮಗಳು ಶುರುವಾಗುತ್ತವೆ. ಬೊಜ್ಜು, ಬಿಪಿ, ಶುಗರ್, ಇನ್ನಿತರೆ ಖಾಯಿಲೆಗಳು ಮೆಲ್ಲನೇ ದೇಹವನ್ನು ಸೇರುತ್ತವೆ. ಅಲ್ಲಿ ಆಶ್ರಯಿಸಲು ನಾವೇ ಅವಕಾಶ ಮಾಡಿಕೊಟ್ಟಿದ್ದೇವೆ ಎನ್ನುವುದು ಮರೆಯುವಷ್ಟು ನಮ್ಮ ಜೀವನ ಕ್ರಮ ಬದಲಾಯಿಸಿಕೊಂಡಿರುತ್ತವೆ. ಯಾವತ್ತು ನಮ್ಮ ಆರೋಗ್ಯ ಹದಗೆಡುತ್ತದೆಯೋ ಅಂದು ವೈದ್ಯರ ಬಳಿ ಸಾಗುತ್ತೇವೆ. ಅಲ್ಲಿ ನಿಮಗೆ ನಿದ್ರೆ, ಆಹಾರ, ಜೊತೆಗೆ ದೇಹಕ್ಕೆ ವ್ಯಾಯಾಮ ಬೇಕು ಎನ್ನುವ ಸಲಹೆ ಬಂದ ಮೇಲೆ ಎಚ್ಚೆತ್ತುಕೊಳ್ಳುವ ಸ್ಥಿತಿ ಈಗ ಹಲವರಲ್ಲಿ ಕಂಡಿದ್ದೇವೆ.
ಯಾಕೆ ದಿನವೂ ಸ್ವಲ್ಪ ಬೇಗನೇ ಎದ್ದು ಒಂದಷ್ಟು ಕಾಲ ನಡಿಗೆಯನ್ನು ನಾವು ರೂಢಿಸಿಕೊಳ್ಳಬಾರದು. ಏಳು ಗಂಟೆಗೆ ಏಳುವವರು ಹದಿನೈದು ನಿಮಿಷ ಮೊದಲೆದ್ದರೆ ಹತ್ತು ನಿಮಿಷವಾದರೂ ವಾಕಿಂಗ್ ಮಾಡಲು ಸಮಯ ಸಿಗುವುದು ಅಲ್ಲವೆ! ನಾವು ನಡೆದಷ್ಟು ನಮ್ಮ ದೇಹ ಬಲಾಢ್ಯವಾಗುತ್ತದೆ ಎನ್ನುತ್ತಾರೆ. ನಮ್ಮ ಕಾಲು ಎರಡನೇ ಹೃದಯವಿದ್ದಂತೆ. ಕಾಲು ಗಟ್ಟಿ ಇದ್ದರೆ ನಾವು ಎಷ್ಟು ದೂರ ಬೇಕಾದರೂ ಕ್ರಮಿಸಬಹುದು. ಕಾಲಿಲ್ಲದಿದ್ದರೆ ಬರೀ ಈ ಹೃದಯ ಇಟ್ಟುಕೊಂಡು ಜಡವಾಗಿ ಬಿದ್ದ ದೇಹವನ್ನು ಇಟ್ಟುಕೊಂಡು ಏನು ಮಾಡಲು ಸಾಧ್ಯ ಎಂದು ನಮ್ಮ ತಂದೆ ಯಾವತ್ತೂ ಹೇಳುತ್ತಾರೆ. ಇದು ಯೋಚಿಸಿದರೆ ಸತ್ಯ ಎನ್ನಿಸುವುದಿಲ್ಲವೆ. ಕಾಲಿನಿಂದ ಇಡೀ ದೇಹಕ್ಕೆ ಶಕ್ತಿಯನ್ನು ತುಂಬಿಕೊಳ್ಳಲು ಸಾಧ್ಯ ಎಂದಾದರೆ ನಾವು ದಿನವೂ ನಡಿಗೆಯನ್ನು ಯಾಕೆ ಮಾಡಬಾರದು. ನಮ್ಮ ಕೆಲಸ ಎಂಥದ್ದೆ ಇರಲಿ ಮುಂಜಾನೆ ಅಥವಾ ಸಂಜೆ ನಮ್ಮ ಬಿಡುವನ್ನು ಸ್ವಲ್ಪ ಕಾಲ ನಡಿಗೆಗೆ ಉಪಯೋಗಿಸಿದರೆ ನಮ್ಮ ಅನಾರೋಗ್ಯದ ಅದೆಷ್ಟೋ ಭಾಗ ಇಲ್ಲವಾಗಿಸುತ್ತದೆ.
ಒಬ್ಬ ಮಹಿಳೆ ತನಗೆ ಶುಗರ್ ಇದೆ ಎಂದು ನನ್ನ ಪರಿಚಯ ಇರುವ ವೈದ್ಯರ ಬಳಿ ಬಂದಿದ್ದರು. ವೈದ್ಯರು ದಿನವೂ ನಿಯಮಿತವಾಗಿ ಸ್ವಲ್ಪ ವಾಕಿಂಗ್ ಮಾಡಿ. ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ದೇಹದಲ್ಲಿಯ ಕ್ಯಾಲೋರಿ ಸ್ವಲ್ಪ ಕಡಿಮೆ ಆಗುತ್ತದೆ ಎಂದು ವೈದ್ಯಕೀಯ ಕೆಲವು ಕಾರಣ ಹೇಳಿದರು. ಆಗ ಆ ಮಹಿಳೆ ನಮಗೆ ಯಾಕೆ ಈ ವ್ಯಾಯಾಮ ಬೇಕು ಅಂತ ಹೇಳುತ್ತೀರಿ. ನಮ್ಮ ಅಜ್ಜಿ, ಅಮ್ಮ ಇವರೆಲ್ಲ ವ್ಯಾಯಾಮ ಮಾಡಿದವರೇ ಅಲ್ಲ. ಅವರಿಗೆ ಈ ಶುಗರ್ರು ಬಿಪಿ ಇಂಥದ್ದೆಲ್ಲ ಬರಲೂ ಇಲ್ಲ. ಈಗಿನ ಆಹಾರ ಪದಾರ್ಥವೇ ಸರಿ ಇಲ್ಲ. ಮಾರ್ಕೆಟ್‌ಗಳಿಗೆ ಬರುವುದೆಲ್ಲ ವಿಷ. ಇದನ್ನು ಸರ್ಕಾರಗಳು ವಿಚಾರಿಸುವುದಿಲ್ಲ. ಜನಸಾಮಾನ್ಯರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಹೀಗೆ ಏನೇನೋ ರಾಜಕೀಯಕ್ಕೆ ತಮ್ಮ ಅನಾರೋಗ್ಯದ ಹಿಂದೆ ಇರುವ ಕಾರಣವನ್ನು ತಂದು ನಿಲ್ಲಿಸಿದರು. ವೈದ್ಯರು ಅವರನ್ನು ಮಾತನಾಡಲು ಬಿಟ್ಟು ಸ್ವಲ್ಪ ಸಮಯ ಸುಮ್ಮನೆ ಕುಳಿತು ನಂತರ ಮಾತನಾಡಿದರು. ಮಾರ್ಕೆಟಿಗೆ ಬರುವ ತರಕಾರಿ ಆಹಾರ ಬೆಳೆಕಾಳುಗಳು ವಿಷ ಇದೆ ಅಥವಾ ಇಲ್ಲ ಎಂದು ನಾನು ವಾದ ಮಾಡುವುದಿಲ್ಲ. ಆದರೆ ನಿಮ್ಮ ಅಜ್ಜಿಗೆ, ಅಮ್ಮನಿಗೆ ಇಲ್ಲದ ಈ ಬಿಪಿ ಶುಗರ್ ತನಗೇಕೆ ಬಂತು ಎನ್ನುವ ಪ್ರಶ್ನೆಗೆ ಒಂದು ಸರಳ ಉತ್ತರ ಕೊಡಬಲ್ಲೆ ಎಂದರು. ಆ ಮಹಿಳೆ ಮುಖ ಉಬ್ಬಿಸಿಕೊಂಡು ಏನು ಎಂದಿದ್ದರು. ಹಿರಿಕರು ಒರಳಲ್ಲಿ ಬೀಸುತ್ತಿದ್ದರು. ಬಾವಿಯಿಂದ ನೀರು ಸೇದುತ್ತಿದ್ದರು. ಅದೆಷ್ಟೋ ಕಿಲೋಮೀಟರ್ ಹೊಲ ತೋಟಗಳಿಗೆ ನಡೆದು ಹೋಗಿ ಊಟ ಕೊಟ್ಟು ಬರುತ್ತಿದ್ದರು ಸಗಣಿ ಬಾಚುತ್ತಿದ್ದರು. ಇದೆಲ್ಲ ಅವರ ನಿತ್ಯದ ಕೆಲ. ಒಂದು ಸಲ ಒರಳಲ್ಲಿ ಬೀಸುವುದು ಎಂದರೆ ಸೊಂಟ ಮತ್ತು ಕೈ ಅದೆಷ್ಟು ಬಾರಿ ತಿರುಗಿರುತಿತ್ತು ಒಮ್ಮೆ ಲೆಕ್ಕ ಹಾಕಿ. ಒಮ್ಮೆ ಗದ್ದೆಗೆ ಹೊರಟರೆ ಅರ್ಧ ಮುಕ್ಕಾಲು ಗಂಟೆ ವಾಕಿಂಗ್ ಆಗಿರುತಿತ್ತು. ಸಗಣಿ ಬಾಚಿದಾಗ ಬಗ್ಗಿ ನಿಂತು ಎಂದು ಅದೆಷ್ಟು ಸಲ ಕಾಲಿನ ತೊಡೆಗಳಿಗೆ ಸೊಂಟ ಕೈಗಳಿಗೆ ವ್ಯಾಯಾಮ ಆಗುತಿತ್ತು. ಇಂಥ ಕೆಲಸದಲ್ಲಿ ಒಂದಾದರೂ ನೀವು ಮಾಡುತ್ತಿದ್ದೀರಾ. ಮಿಕ್ಸರ್, ವಾಶಿಂಗ್ ಮಷಿನ್. ನೀರೆತ್ತಲು ಪಂಪ್‌ಸೆಟ್, ಅಂಗಳಕ್ಕೆ ನಿಂತರೆ ವಾಹನ ಹೀಗೆ ಎಲ್ಲವಕ್ಕೂ ಪರಾವಲಂಬಿಗಳು. ರೋಗ ಬೆಳೆಯಲು ನಾವೇ ನಮ್ಮ ದೇಹದಲ್ಲಿ ಅವಕಾಶ ಮಾಡಿ ಕೊಟ್ಟಿದ್ದೇವೆ. ಕಠೀಣವಾಗಿ ವ್ಯಾಯಾಮ ಯೋಗ ಮಾಡುವುದಿರಲಿ ಒಂದು ಘಳಿಗೆಯ ವಾಕಿಂಗ್ ಕೂಡ ನಾವು ಮಾಡುವುದಿಲ್ಲ. ಹಾಗಿರುವಾಗ ಆ ಹಿರಿಕರ ಜೀವನಕ್ಕೆ ನಾವು ಹೇಗೆ ಸಾಟಿ ಎಂದರು.
ಹೌದು ನಾಲ್ಕು ಹೆಜ್ಜೆ ನಡೆದು ನೋಡಿ ಆಗ ರೋಗದಿಂದ ದೂರ ಆಗಿ ನೀವು ಆರೋಗ್ಯದಲ್ಲಿ ಕಿಂಗ್ ಆಗುತ್ತೀರಿ. ನಡಿಗೆ ವ್ಯಾಯಾಮಗಳ ರಾಜನಂತೆ. ಅದೆಷ್ಟೋ ಬಾರಿ ವಾಕಿಂಗ್ ಎಂದು ಕನ್ನಡದಲ್ಲಿ ಬರೆಯುವಾಗಲೆಲ್ಲ ನನ್ನ ಮನಸ್ಸಿಗೆ ತೋಚುವುದು ವಾಕಿಂಗ್ ಮಾಡಿದರೆ ವ್ಹಾ ನಾನು ಕಿಂಗ್ ಎನ್ನುವ ಭಾವ ಹುಟ್ಟುತ್ತದೆ. ಆರೋಗ್ಯವಾಗಿದ್ದಲ್ಲಿ ನಾವು ನಿಜವಾಗಿಯೂ ಕಿಂಗ್‌ಗಳೆ ಅಲ್ಲವೆ.
- * * * -