ಮಂಗಳೂರು, ಫೆ 20, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಗುರುವಾರ ಮುಂಜಾನೆ ಕಾಡಾನೆ ಪ್ರತ್ಯಕ್ಷವಾಗಿತ್ತು. ಆನೆಯು ಬೆಳಿಗ್ಗೆ ಸುಮಾರು 5.30ಕ್ಕೆ ಪಟ್ಟಣದ ಕಾಶಿ ಕಟ್ಟೆಯಿಂದ ನುಚಿಲಾಕ್ಕೆ ಯಾವುದೇ ಹಾನಿ ಉಂಟುಮಾಡದೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ತ್ಯಾಗರಾಜ್ ಹೇಳಿದ್ದಾರೆ.
ಇದೇ ಆನೆಯನ್ನು ಕೆಲ ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಹರಿಹರ ಎಂಬ ಸಣ್ಣ ಹಳ್ಳಿಯಲ್ಲಿ ಗುರುತಿಸಲಾಗಿತ್ತು. ಆನೆಯು ಕೆಲ ದಿನಗಳಿಂದ ಹತ್ತಿರದ ಕಾಡುಗಳಲ್ಲಿ ಸುತ್ತಾಡುತ್ತಿದೆ. ಆದರೆ, ಇಲ್ಲಿಯವರೆಗೆ ಆನೆ ಜನರಿಗೆ ಯಾವುದೇ ತೊಂದರೆ ಮಾಡಿಲ್ಲ. ಅಥವಾ ಯಾವುದೇ ಆಸ್ತಿ-ಪಾಸ್ತಿಗೆ ಹಾನಿ ಮಾಡಿಲ್ಲ ಎಂದು ತ್ಯಾಗರಾಜ್ ಹೇಳಿದರು. ಪ್ರಸಿದ್ಧ ಯಾತ್ರಾ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯ ಪಶ್ಚಿಮ ಘಟ್ಟಗಳ ತಪ್ಪಲಲ್ಲಿದೆ.