ಮಾಸ್ಕೋ, ಏಪ್ರಿಲ್ 20,ಕರೋನವೈರಸ್ ಸಾಂಕ್ರಾಮಿಕ ರೋಗಕ್ಕೆ ಜಾಗತಿಕ ಸ್ಪಂದನೆ ಬೆಂಬಲಿಸುವಂತೆ ಮತ್ತು ವಾಣಿಜ್ಯ ನಿರ್ಬಂಧಗಳನ್ನು ತೆರವುಗೊಳಿಸುವಂತೆ ವಿಶ್ವದ 20 ಅತಿದೊಡ್ಡ ಆರ್ಥಿಕ ರಾಷ್ಟ್ರಗಳನ್ನೊಳಗೊಂಡ ಜಿ-20 ಒಕ್ಕೂಟಕ್ಕೆ ವಿಶ್ವ ಆರೋಗ್ಯ ಸಂಸ್ಥೆ, ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಒತ್ತಾಯಿಸಿದ್ದಾರೆ.ಕೊರೊನ ವೈರಸ್ ವಿರುದ್ಧ ಜಾಗತಿಕ ಹೋರಾಟ ಕುರಿತು ಚರ್ಚಿಸಲು ವಿವಿಧ ದೇಶಗಳ ಆರೋಗ್ಯ ಸಚಿವರೊಂದಿಗೆ ಭಾನುವಾರ ವಿಡಿಯೋ ಸಂವಾದ ನಡೆಸಿದ ಘೆಬ್ರೆಯೆಸಸ್, ಆರೋಗ್ಯ ವ್ಯವಸ್ಥೆಯಲ್ಲಿ ದೌರ್ಬಲ್ಯಗಳನ್ನು ಸಾಂಕ್ರಾಮಿಕ ರೋಗ ಎತ್ತಿ ತೋರಿದೆ. ಈ ನಿಟ್ಟಿನಲ್ಲಿ ಜ್ಞಾನ ವಿನಿಮಯ ಹೆಚ್ಚಿಸುವುದು ಮತ್ತು ಸಾಮರ್ಥ್ಯಗಳ ಹೆಚ್ಚಿಸಿಕೊಳ್ಳುವತ್ತ ರಾಷ್ಟ್ರಗಳು ಕ್ರಮ ತೆಗೆದುಕೊಳ‍್ಳಬೇಕು ಎಂದು ಹೇಳಿದ್ದಾರೆ. ಜಿ-20 ರಾಷ್ಟ್ರಗಳು ಕೊವಿಡ್-19 ಸೋಂಕು ವಿರುದ್ಧ ಬದ್ಧತೆಯೊಂದಿಗೆ ವೈಜ್ಞಾನಿಕ ಆಧಾರದ ಮೇಲೆ ಹೋರಾಡಬೇಕು. ಜಾಗತಿಕ ಸ್ಪಂದನೆಗೆ ಪ್ರೋತ್ಸಾಹ ಮುಂದುವರೆಸಬೇಕು. ಉತ್ಪಾದನೆ ಹೆಚ್ಚಿಸಲು ಮತ್ತು ಅಗತ್ಯ ವಸ್ತುಗಳನ್ನು ಸಮನಾಗಿ ವಿತರಿಸಲು ಒಟ್ಟಾಗಿ ಕೆಲಸ ಮಾಡಬೇಕು. ವಾಣಿಜ್ಯ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಘೆಬ್ರೆಯೆಸಸ್ ಟ್ವೀಟ್ ಮಾಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ವರದಿಯಂತೆ ಭಾನುವಾರದವರೆಗೆ, ವಿಶ್ವಾದ್ಯಂತ 2.2 ದಶಲಕ್ಷಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, 1,52,000 ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ.