ಭಾರತೀಯ ಸಂಸ್ಕೃತಿಯನ್ನು ಬೆಳೆಸಿದವರು ವಿಶ್ವಕರ್ಮ: ಡಾ.ದುರಗೇಶ್ ಕೆ.ಆರ್

ಭಾರತೀಯ ಸಂಸ್ಕೃತಿಯನ್ನು ಬೆಳೆಸಿದವರು ವಿಶ್ವಕರ್ಮ: ಡಾ.ದುರಗೇಶ್ ಕೆ.ಆರ್ Vishwakarma was the one who developed Indian culture: Dr. Duragesh KR

ಗದಗ 17: ದೇಶಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್‌. ತಿಳಿಸಿದರು. 

ನಗರದ  ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ  ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ದೇಶದ ಬೆನ್ನೆಲಬು ರೈತನಾದರೆ ರೈತನಿಗೆ ಹೊಲದಲ್ಲಿ ಉಳುಮೆ ಮಾಡಲು ಉಪಯೋಗಿಸುವ ಸಲಕರಣೆಗಳನ್ನು ಪೂರೈಕೆ ಮಾಡುವವರು ವಿಶ್ವಕರ್ಮದವರಾಗಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಬೆಳೆಸಿದವರು ವಿಶ್ವಕರ್ಮರು. ಭಾರತ ದೇಶದಲ್ಲಿ ವಿವಿಧ ಐತಿಹಾಸಿಕ ದೇವಾಲಯಗಳನ್ನು  ನಿರ್ಮಾಣ  ಮಾಡಿದ ಹಿರಿಮೆ ವಿಶ್ವಕರ್ಮರಿಗೆ ಸಲ್ಲುತ್ತದೆ.   ಶ್ರಮ ಹಾಗೂ ಕಾಯಕ ನಿಷ್ಟೆ ಇನ್ನೊಂದು ಹೆಸರೇ ವಿಶ್ವಕರ್ಮರು.  ವಿಶ್ವಕರ್ಮನೆಂಬುವನು ಇಲ್ಲದಿದ್ದರೆ ಈ ಜಗತ್ತಿಗೆ ಅಸ್ತಿತ್ವವೇ ಇರುತ್ತಿರಲಿಲ್ಲ. ಸಕಲ ವಿದ್ಯೆಗಳು ವಿಶ್ವಕರ್ಮನಿಂದಲೇ ಬಂದಿವೆ.  ವೇದೋಪನಿಷತ್‌ಗಳು ಸಹ ವಿಶ್ವ ಕರ್ಮನನ್ನು  ಕೊಂಡಾಡಿವೆ ಎಂದರು.   

ರಾಜ ವಿಷ್ಣುವರ್ಧನನು ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ರಾಜನಾಗಿದ್ದ.  ಇವನ ರಾಣಿ  ಶಾಂತಲೆಯು ಶಿಲ್ಪಕಲೆ ಹಾಗೂ ಸಂಸ್ಕೃತಿಯಲ್ಲಿ  ಹೆಚ್ಚಿನ ಹೆಚ್ಚಿನ ಆಸಕ್ತಿಯುಳ್ಳವಳಾಗಿದ್ದಳು. ಬೇಲೂರಿನ ಚನ್ನಕೇಶವ ದೇವಾಲಯ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳ ನಿರ್ಮಾತೃ ವಿಶ್ವಕರ್ಮ ಸಮಾಜದ ಅಮರ ಶಿಲ್ಪಿ ಜಕಣಾಚಾರಿಯವರಾಗಿದ್ದಾರೆ.  ಈಗಿನ ಮಕ್ಕಳಿಗೆ ವಿಶ್ವಕರ್ಮರ ಮಾರ್ಗದರ್ಶನ ತಿಳಿಸಬೇಕು ಹಾಗೂ ಸಾಹಿತ್ಯದ ಒಲವನ್ನು ಬೆಳೆಸಲು ಪ್ರೇರೇಪಿಸಬೇಕು.  ಎಲ್ಲರೂ ಕಾಯಕ ತತ್ವ ಬೆಳೆಸಿಕೊಳ್ಳಬೇಕು.      

ಹಿರಿಯ ಸಾಹಿತಿ ಡಿ.ವಿ.ಬಡಿಗೇರ ಉಪನ್ಯಾಸ ನೀಡುತ್ತಾ ಮಾತನಾಡಿ, ವಿಶ್ವಕರ್ಮರ ಪೂಜೆ ಈ ಮೊದಲು ವ್ಯಕ್ತಿಗರ ಹಾಗೂ ಮನೆಗಳಿಗೆ ಸೀಮಿತವಾಗಿತ್ತು. ಆದರೆ ಈಗ ರಾಜ್ಯ ಸರ್ಕಾರದ ಅದೇಶದನ್ವಯ  ಜಯಂತಿ ಆಚರಣೆ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.  ಎಲ್ಲಿ  ಶ್ರಮದ ಬೆವರ ಹನಿ ಇದೆ ಅಲ್ಲಿ ನಾನು ಇದ್ದೇನೆ ಎಂದು ವಿಶ್ವ ಕರ್ಮರು ಹೇಳುತ್ತಾರೆ.  ವಿಶ್ವಕರ್ಮರು ಶ್ರಮ ಪ್ರಿಯರು, ಕಾಯಕ ಪ್ರಿಯರಾಗಿದ್ದಾರೆ.  ಸಕಲ ಚರಾಚರ ವಸ್ತುಗಳಲ್ಲ ವಿಶ್ವ ಕರ್ಮ ಇದ್ದಾನೆ. ವಿಶ್ವಕರ್ಮರು ಕಾಯಕ ಯೋಗಿಗಳು ಎಂದು ವಿವರಿಸುತ್ತಾ ತಮ್ಮ ಚುಟುಕು ಸಾಹಿತ್ಯದ ಮೂಲಕ ವಿಶ್ವ ಕರ್ಮರನ್ನು  ಕೊಂಡಾಡಿರುವುದು ನೆರೆದ ಜನಸ್ತೋಮದ ಗಮನ ಸೆಳೆಯಿತು. 

ಇದೇ ಸಂದರ್ಭದಲ್ಲಿ  ಕವಿ ಸಾಹಿತಿ ಗೋಪಾಲ ಬಡಿಗೇರ ಅವರು ರಚಿಸಿದ ಶ್ರೀ ವಿಶ್ವ ಕರ್ಮ ಸ್ತುತಿ ಮಾಲಾ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಎಸ್‌.ಎಸ್‌.ಎಲ್‌.ಸಿ ಮತ್ತು  ಪಿ.ಯು.ಸಿ ಪರೀಕ್ಷೆಯಲ್ಲಿ  ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ವಿಶ್ವ ಕರ್ಮ ಸಮಾಜ ಅಧ್ಯಕ್ಷ ದೇವೇಂದ್ರ​‍್ಪ ಬಡಿಗೇರ,  ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಆರ್‌.ಡಿ.ಕಡ್ಲಿಕೊಪ್ಪ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್‌. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೈಶೈಲ ಸೋಮನಕಟ್ಟಿ, ಹಿರಿಯರು ಹಾಜರಿದ್ದರು. 

ಸುತಾರ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿದರು.  ವಿಶ್ವನಾಥ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು.