ವಿಶ್ಚ ಶ್ರವಣ ದಿನ ಕಾರ್ಯಕ್ರಮಕಿವಿಗಳನ್ನು ಜೀವನದುದ್ದಕ್ಕು ರಕ್ಷಣೆ ಮಾಡಿಕೊಳ್ಳಬೇಕು: ಡಾ.ರವೀಂದ್ರನಾಥ್

Vishcha Sravana Day Program Deaf should be protected for life: Dr. Rabindranath

ವಿಶ್ಚ ಶ್ರವಣ ದಿನ ಕಾರ್ಯಕ್ರಮಕಿವಿಗಳನ್ನು ಜೀವನದುದ್ದಕ್ಕು ರಕ್ಷಣೆ ಮಾಡಿಕೊಳ್ಳಬೇಕು: ಡಾ.ರವೀಂದ್ರನಾಥ್  

ಕೊಪ್ಪಳ 04: ಕಿವಿಗಳು ಪ್ರತಿಯೊಬ್ಬ ಮನುಷ್ಯನ ಪಂಚೆಂದ್ರಿಯಗಳಲ್ಲಿ ಪ್ರಮುಖ ಅಂಗವಾಗಿದ್ದು, ಅವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕು ರಕ್ಷಣೆ ಮಾಡಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ್ ಎಂ.ಹೆಚ್‌. ಹೇಳಿದರು. 

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗಂಗಾವತಿ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಮತ್ತು ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕನಕಗಿರಿ ಪಟ್ಟಣದ ಸಂತೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ವಿಶ್ವ ಶ್ರವಣ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಪ್ರತಿ ವರ್ಷ ಮಾರ್ಚ್‌ 3 ರಂದು “ವಿಶ್ಚ ಶ್ರವಣ ದಿನ” ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಶ್ರವಣದೋಷ ಮತ್ತು ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಾಗಿದೆ. “ಬದಲಾಗುತ್ತಿರುವ ಮನಸ್ಥಿತಿ: ಕಿವಿ ಮತ್ತು ಶ್ರವಣ ಆರೈಕೆಯನ್ನು ಎಲ್ಲರಿಗೂ ವಾಸ್ತವವಾಗಿಸಲು ನಿಮ್ಮನ್ನು ಸಶಕ್ತಗೊಳಿಸಿಕೊಳ್ಳಿ!” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಅರಿವು ಮೂಡಿಸುವ ಕಾರ್ಯಕ್ರಮ ಆಚರಿಸಲಾಗುತ್ತದೆ. ಕಿವಿಯಲ್ಲಿ ಕಡ್ಡಿ ಹಾಕಬಾರದು, ಎಣ್ಣೆ ಹಾಕಬಾರದು, ನಕಲಿ ವೈದ್ಯರ ಕಡೆಯಿಂದ ಕಿವಿಯಲ್ಲಿ ಗುಗ್ಗೆ ತೆಗೆಸಿಕೊಳ್ಳಬಾರದು, ವೈದ್ಯರ ಸಲಹೆ ಇಲ್ಲದೆ ಕಿವಿಯಲ್ಲಿ ಏನು ಹಾಕಬಾರದು, ಕಲುಷಿತ ನೀರಿನಲ್ಲಿ ಈಜಬಾರದು, ಎಂದು ತಿಳಿಸಿದರು.  

ಕಿವಿನೋವು, ಸೋರುವಿಕೆ ಕಂಡು ಬಂದರೆ ತಮ್ಮ ಸಮೀಪದ ತಾಲೂಕಾ ಅಥವಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಕಿವಿ, ಮೂಗು, ಗಂಟಲು ತಜ್ಞರನ್ನು ಸಂಪರ್ಕಿಸಬೇಕು ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಶ್ರವಣ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಕುಟುಂಬ ಕಲ್ಯಾಣ ಕಾರ್ಯಕ್ರಮದ ಕುರಿತು ಮಾತನಾಡುತ್ತಾ, ಮಿತ ಸಂತಾನದಿಂದ ಕುಟುಂಬದ ಅಭಿವೃದ್ಧಿ ಸಾಧ್ಯ ಹಾಗೂ ಕುಟುಂಬ ಕಲ್ಯಾಣ ಯೋಜನೆಗಳಾದ ತಾತ್ಕಾಲಿಕ ಹಾಗೂ ಶಾಶ್ವತ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಅಂತರ ಕಾಪಾಡಿ, ತಾಯಿ-ಮಕ್ಕಳ ಆರೋಗ್ಯ ರಕ್ಷಿಸಬೇಕೆಂದು ತಿಳಿಸಿದರು.ಕಿವಿ, ಮೂಗು, ಗಂಟಲು ತಜ್ಞ ಡಾ. ಅವಿನಾಶ ಅವರು, ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ, ನವಜಾತು ಶಿಶುವಿನ ಕಿವಿಯ ಆರೈಕೆ, ಕಾರ್ಯಕ್ರಮದಡಿಯಲ್ಲಿ ಸಿಗುವ ಸೇವಾ ಸೌಲಭ್ಯಗಳ ಮತ್ತು ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು.  

ಗಂಗಾವತಿ ತಾಲೂಕ ಆರೋಗ್ಯಾಧಿಕಾರಿ ಡಾ.ಗೌರಿಶಂಕರ ಅವರು, ಕಿವಿಯ ಆರೋಗ್ಯ ರಕ್ಷಣೆಯಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ವಿವರವಾಗಿ ಮಾತನಾಡಿದರು.  

ಆಡಿಯೋಲಾಜಿಸ್ಟ್‌ ಬಿಂದು ಅವರು, “ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ”ದಡಿಯಲ್ಲಿ ಕಿವಿಯ ಪರೀಕ್ಷೆ ಹಾಗೂ ಸೇವಾ ಸೌಲಭ್ಯಗಳ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಕನಕಗಿರಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಹುಸೇನ್‌ಬೀ ಚಳ್ಳಮರದ, ಉಪಾದ್ಯಕ್ಷರಾದ ಕಂಠಿ ರಂಗನಾಯಕ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ರಾಜೇಶ, ಹನುಮೇಶ, ಸಾದೀಕ್ ಪಾಷಾ, ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಹನಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ., ಆರೋಗ್ಯ ನೀರೀಕ್ಷಣಾಧಿಕಾರಿ ರಮೇಶ, ಆಪ್ತಸಮಾಲೋಚಕ ಸಿದ್ದರಾಮಪ್ಪ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.