ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಚೊಚ್ಚಲ ಶತಕಕ್ಕೆ ೧೦ ವರ್ಷ

ನವದೆಹಲಿ, ಡಿ 24 ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಚೊಚ್ಚಲ ಶತಕಕ್ಕೆ ಇದೀಗ 10 ವರ್ಷಗಳು ತುಂಬಿದೆ. 2009ರ ಡಿ 24 ರಂದು ಕೊಹ್ಲಿ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದ್ದರು. ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ 107 ರನ್ ಬಾರಿಸಿದ್ದರು.  ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 315 ರನ್ ಗಳಿಸಿತ್ತು. ಉಪುಲ್ ತರಂಗ ಶ್ರೀಲಂಕಾ ಪರ 118 ರನ್‌ ಗಳಿಸಿದ್ದರು. ಗುರಿ ಹಿಂಬಾಲಿಸಿದ್ದ ಭಾರತದ ಆರಂಭ ಕಳೆಪೆಯಾಗಿತ್ತು. ತಂಡದ ಮೊತ್ತ 23 ರನ್ ಇರುವಾಗಲೇ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್‌ ಅವರನ್ನು ಕಳೆದುಕೊಂಡಿತ್ತು. ನಂತರ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ 224 ರನ್ ಜತೆಯಾಡಿದ್ದರು. ಇವರ ಅದ್ಭುತ ಜತೆಯಾಟದಿಂದ ಭಾರತ ಉತ್ತಮ ಸ್ಥಿತಿಗೆ ಮರಳಿತ್ತು.  107 ರನ್ ಗಳಿಸಿ ಅಬ್ಬರಿಸಿದ್ದ ಕೊಹ್ಲಿ ವಿಕೆಟ್ ಒಪ್ಪಿಸಿದ್ದರು. ಆದರೆ, ಗೌತಮ್ ಗಂಬೀರ್‌ ಕೊನೆಯವರೆಗೂ ಬ್ಯಾಟಿಂಗ್ ಮಾಡಿ 150 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇವರ ಬ್ಯಾಟಿಂಗ್ ನೆರವಿನಿಂದ ಭಾರತ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು.  ಅಲ್ಲಿನಿಂದ ಇಲ್ಲಿಯವರೆಗೂ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 43 ಶತಕ ಬಾರಿಸಿದ್ದಾರೆ. ಪ್ರಸ್ತುತ ಆವೃತ್ತಿಯಲ್ಲಿ ರೋಹಿತ್‌ ಬಳಿಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟ್ಸ್ ಮನ್‌ ಆಗಿ ಕೊಹ್ಲಿ (1,377) ಹೊರಹೊಮ್ಮಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ 27 ಶತಕ ಬಾರಿಸಿದ್ದಾರೆ.