ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರ ಒತ್ತಾಯ

ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರ ಒತ್ತಾಯ  Villagers demand solution to water problem

ಲೋಕದರ್ಶನ ವರದಿ 

ಮುದ್ದೇಬಿಹಾಳ   23: ತಾಲೂಕಿನ ರೂಢಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂಡಖರ್ಚಿಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಇದರ ಬಗ್ಗೆ ಪಿಡಿಓ ಅವರಿಗೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮಂಗಳವಾರ ಗ್ರಾಮಸ್ಥರು ಮುದ್ದೇಬಿಹಾಳ ತಾಲೂಕ ಪಂಚಾಯತ ಗೇಟ್ ಎದುರಿಗೆ ಖಾಲಿ ಕೊಡಗಳನ್ನಿಟ್ಟು ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ರಂಗಪ್ಪ ಸುಗುಂಡರ,ಗುಂಡಖರ್ಚಿಗಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸುಮಾರು 25 ಮನೆಗಳಿಗೆ ಪೈಪ್‌ಲೈನ ಇಲ್ಲದ ಕಾರಣ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತಗೊಂಡಿವೆ.

ಇದರ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಗ್ರಾಮಸ್ಥರ ಮನವಿಗೆ ಸ್ಪಂದನೆ ನೀಡುತ್ತಿಲ್ಲ. ಪ್ರತಿ ಬಾರಿಯೂ ಇನ್ನೂ ಎರಡು ದಿನಗಳಲ್ಲಿ ಮಾಡುತ್ತೇವೆ ಎಂದು ಸಮಜಾಯಿಷಿ ಉತ್ತರ ನೀಡುತ್ತಾ ಬಂದಿದ್ದಾರೆ. ಈ ಬಾರಿ ಮಳೆ ಇಲ್ಲದೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ದನಕರುಗಳಿಗೂ ನೀರು ಇಲ್ಲದಂತಾಗಿದೆ. ಕೂಡಲೇ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಮೇಲಾಧಿಕಾರಿಗಳ ಮಾತಿಗೂ ಕಿಮ್ಮತ್ತಿಲ್ಲ:ಇತ್ತಿಚಿಗಷ್ಟೇ ವಿಜಯಪುರ ಜಿಪಂ ಸಿಇಓ ಅವರು ಅಧಿಕಾರಿಗಳ ಸಭೆ ನಡೆಸಿ ಗ್ರಾಮೀಣ ಭಾಗದ ಜನರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೋಳ್ಳಬೇಕು. ಇದಕ್ಕೆ ಬೇಕಾದ ಅಗತ್ಯತೆಯನ್ನು ಕೂಡಲೇ ಕಛೇರಿಯಿಂದ ಪಡೆದುಕೊಂಡು ಜನರಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದರು. ಆದರೆ ಕೆಲ ಸ್ಥಳೀಯ ಪಂಚಾಯತ ಅಧಿಕಾರಿಗಳು ಇದರ ಬಗ್ಗೆ ತೆಲೆಕೆಡಿಸಿಕೊಳ್ಳದೇ ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.