ಲೋಕದರ್ಶನ ವರದಿ
ಬ್ಯಾಡಗಿ23: ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸುಸಜ್ಜಿತವಾದ ಸ್ಮಶಾನದ ಅವಶ್ಯಕತೆಯಿದ್ದು, ಇದಕ್ಕಾಗಿ ಸರಕಾರದಿಂದ ಜಮೀನನ್ನು ಮಂಜೂರಿ ಮಾಡಬೇಕೆಂದು ಗ್ರಾಮಸ್ಥರು ತಾಲೂಕಾ ಆಡಳಿತವನ್ನು ಒತ್ತಾಯಿಸಿದ ಘಟನೆ ಜನಸ್ಪಂದನ ಸಭೆಯಲ್ಲಿ ಜರುಗಿತು.
ಬುಧವಾರದಂದು ತಾಲೂಕಿನ ನೆಲ್ಲಿಕೊಪ್ಪ ಗ್ರಾಮದಲ್ಲಿ ಜರುಗಿದ ಕಾಗಿನೆಲೆ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರಾದ ಅರ್ಜುನಪ್ಪ ಲಮಾಣಿ, ಗ್ರಾಮದಲ್ಲಿ ಬಹಳಷ್ಟು ವರ್ಷಗಳಿಂದ ಮೃತ ಜನರ ಅಂತ್ಯ ಸಂಸ್ಕಾರ ನಡೆಸಲು ಸೂಕ್ತವಾದ ಜಾಗವಿಲ್ಲದೆ ಎಲ್ಲೆಂದರಲ್ಲಿ ಮಾಡಬೇಕಾಗಿದೆ. ಕಾರಣ ತಾಲೂಕಿನ ಆಡಳಿತ ಈ ಬಗ್ಗೆ ಕ್ರಮ ವಹಿಸಿ ಸ್ಮಶಾನಕ್ಕಾಗಿ ಜಮೀನನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ ಶರಣಮ್ಮ ಕಾರಿ, ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಕಂದಾಯ ಭೂಮಿಯು ಇರದ ಕಾರಣ ಯಾರಾದರೂ ಜಮೀನು ಮಾರಾಟ ಮಾಡಲು ಮುಂದೆ ಬಂದರೆ ಸಕರ್ಾರಿ ದರದನ್ವಯ ಖರೀದಿಸಿ ನೀಡಬಹುದು ಎಂದರಲ್ಲದೆ ಸರಕಾರದಿಂದ ಒಂದು ಸಾವಿರ ಜನರಿಗೆ ಇಪ್ಪತ್ತು ಗುಂಟೆಯಂತೆ ಜಮೀನನ್ನು ಸ್ಮಶಾನಕ್ಕಾಗಿ ಮಂಜೂರಾತಿ ಮಾಡಬಹುದಾಗಿದೆ ಎಂದು ತಿಳಿಸಿದರು.
ಸರ್ವೇ ನಂಬರ್ 11 ರಲ್ಲಿ ನಿರ್ಮಾಣವಾಗಿರುವ ಬಹಳಷ್ಟು ಮನೆಗಳಿಗೆ ಈ ಸ್ವತ್ತು ಉತಾರ ಸಿಗದೆ ಜನರು ಪರದಾಡುವಂತಾಗಿದೆ, ಜೊತೆಗೆ ಓ.ಟಿ.ಸಿ. ಆಗಿದ್ದರೂ ಸರಕಾರಿ ಪ್ರಮಾಣ ಪತ್ರಗಳು ಸಕಾಲಕ್ಕೆ ಸಿಗದೇ ತೊಂದರೆ ಪಡುವಂತಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥ ವೀರೇಶ ಲಮಾಣಿ ಹಾಗೂ ಇನ್ನಿತರರು ಆಗ್ರಹಿಸಿದಾಗ ತಹಶೀಲ್ದಾರರು ಈ ಸಮಸ್ಯೆಗಳ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು
ತಾ ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಬೀದ ಗದ್ಯಾಳ ಮಾತನಾಡಿ, ಯಾವುದೇ ಇಲಾಖೆಯ ಸಮಸ್ಯೆಯಿರಲಿ, ಅದರ ಬಗ್ಗೆ ತಾಲೂಕ ಆಡಳಿತ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತದೆ. ಆದರೆ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಲಿಖಿತವಾಗಿ ನೀಡಿದರೆ ಉತ್ತಮ ಎಂದರಲ್ಲದೆ, ಗ್ರಾಮದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯತಿ ವತಿಯಿಂದ ಕ್ರಮ ವಹಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ರಸ್ತೆ, ಚರಂಡಿ ವ್ಯವಸ್ಥೆ, ರೇಷನ್ ವಿತರಣೆ, ಪಶು ಚಿಕಿತ್ಸೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಸಾರ್ವಜನಿಕ ಸಮಸ್ಯೆಗಳ ಕುರಿತು ಅಹವಾಲನ್ನು ಸ್ವೀಕರಿಸಿ ಕ್ರಮದ ಭರವಸೆ ನೀಡಲಾಯಿತು. ಗ್ರಾ.ಪಂ. ಅಧ್ಯಕ್ಷೆ ಲಲಿತಾ ಲಮಾಣಿ, ತಾ.ಪಂ. ಸದಸ್ಯ ಮಹೇಶಗೌಡ ಪಾಟೀಲ, ವಿವಿಧ ಇಲಾಖಾಧಿಕಾರಿಗಳಾದ ಪುಂಡಲೀಕ ಮಾನವರೆ, ಟಿ.ವಿಜಯಲಕ್ಷ್ಮಿ, ಡಾ. ಗೋಪಿನಾಥ್, ಬಿ.ಕೆ. ರುದ್ರಮುನಿ, ತಿಮ್ಮಾರೆಡ್ಡಿ, ವೈ.ಕೆ. ಮಟಗಾರ, ಆರ್.ಎಂ. ಸೊಪ್ಪಿನ ಮಠ, ಹಾಲೇಶ ಅಂತರವಳ್ಳಿ, ಆರ್.ವೈ. ಬೋಗಾರ, ನೀಲಪ್ಪ ಕಜ್ಜರಿ, ವೀರಪ್ಪ ತಳವಾರ, ಕೆ. ಏಚ್. ಪೂಜಾರ, ನಿಯಾಜ್ ಅಹ್ಮದ ದೊಡ್ಡಮನಿ, ಆರ್. ಸಿ.ದ್ಯಾಮನಗೌಡ್ರ ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.