ವಿಜಯಪುರ: ಜಿಲ್ಲಾಡಳಿತದಿಂದ ಮತದಾರರ ದಿನಾಚರಣೆ

ಲೋಕದರ್ಶನ ವರದಿ

ವಿಜಯಪುರ 25: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಜೆಗಳೆ ಪ್ರಭುಗಳಾಗಿದ್ದು, ತಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಯೋಗ್ಯ ಅಭ್ಯರ್ಥಿ ಆಯ್ಕೆಯ ಜೊತೆಗೆ ದೇಶದ ಸರ್ವಾ೦ಗೀಣ ಅಭಿವೃದ್ಧಿಗೆ ನೆರವಾಗಬೇಕೆಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಸದಾನಂದ ನಾಯಿಕ ಹೇಳಿದರು.

ನಗರದ ಕಂಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಇಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು  ಉದ್ಘಾಟಿಸಿ ಮಾತನಾಡಿ ಮತದಾನ ನಿಮ್ಮ ಹಕ್ಕು ಅದರ ಮಹತ್ವವನ್ನು ಅರಿತು ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಸುಭದ್ರ ಹಾಗೂ ಅಭಿವೃದ್ಧಿ ಪರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿ.ಎಸ್.ಪೂಜೇರಿ ಅವರು, ಪ್ರತಿ ವರ್ಷ ವಿಶೇಷ ಘೋಷಣೆಯೊಂದಿಗೆ ಮತದಾರರ ದಿಣಾಚರಣೆಯನ್ನು ಆಚರಿಸಲಾಗುತ್ತಿದೆ. ಬಲಿಷ್ಟ  ಪ್ರಜಾ ಪ್ರಭುತ್ವಕ್ಕಾಗಿ ಮತದಾರರ ಸಾಕ್ಷರತೆ ಅಂಗವಾಗಿ ದೇಶದ 6.50 ಲಕ್ಷ ಸ್ಥಳಗಳಲ್ಲಿ ಹಾಗೂ 10 ಲಕ್ಷ ಮತಗಟ್ಟೆಗಳಲ್ಲಿ ಈ ದಿನಾಚರಣೆ ಆಚರಿಸಲಾಗುತ್ತಿದೆ. ದೆಶದಲ್ಲಿ 18 ರಿಂದ 24 ವರ್ಷದ ವಯೋಮಾನದ 25 ಕೋಟಿ ಯುವ ಮತದಾರರು ಇದ್ದು ಎಲ್ಲರೂ ತಪ್ಪದೇ ಮತದಾನ ಮಾಡುವ ಕುರಿತು ಮುಂದೆ ಬರಬೇಕು.ಭಾರತದ ಭವಿಷ್ಯಕ್ಕಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಕರೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ ಮೋಹನ ಕುಮಾರಿ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಪ್ರಬಂಧ,ರಸ ಪ್ರಶ್ನೆ ಸ್ಪರ್ಧೆ, ಕಿರು ನಾಟಕ ಹಾಗೂ ವಿವಿಧ ಸ್ಪರ್ಧಾಗಳಲ್ಲಿ ವಿಜೇತರಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನವ ಮತ್ತು ವಿಕಲಚೇತನ ಮತದಾರರಿಗೆ ಎಪಿಕ್ ಕಾರ್ಡ ವಿತರಿಸಲಾಯಿತು. ಅದರಂತೆ ಅತ್ಯಂತ ವಯೋವೃದ್ಧ ಮತದಾರರಾದ ಕಸ್ತೂರಿ ಶೆಟಗಾರ,ರುದ್ರಪ್ಪ ಕಲಶೆಟ್ಟಿ,ಶಾರದಾಭಾಯಿ ಮಸಳಿ, ಸಾಹೇಬಗೌಡ ಗೌಡರ ಮತ್ತು ಕೌಶಲ್ಯ ಗೌಡರ ಇವರನ್ನು ಸನ್ಮಾನಿಸಲಾಯಿತು. ಅಲ್ಲದೇ ಅತ್ಯುತ್ತಮ ನೂಡಲ್ ಅಧಿಕಾರಿಗಳಾದ ಎಂ.ಬಿ.ರಜಪೂತ, ಎಂ.ಎಸ್.ಮುನವಳ್ಳಿ, ಚಿದಾನಂದ ಆನೂರ ಹಾಗೂ ಅತ್ಯುತ್ತಮ ಬಿಎಲ್ ಒ.ಎನ್.ಎಲ್.ಅರವತ್ತು ಇವರನ್ನು  ಆಯ್ಕೆ ಮಾಡಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಪಮಚಾಯತ ಮುಖ್ಯ ಕಾರ್ಯನಿವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ದಿ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆನ್ನೂರ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಟೆ ಹಾಗೂ ಇತರರು ಉಪಸ್ಥಿತರಿದ್ದರು. ವೀರೇಶ ವಾಲಿ ಪ್ರಾರ್ಥಿಸಿದರು. ಎಚ್.ಎ.ಮಮದಾಪೂರ ಅವರು ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ವರ್ಧಾ  ನೀಲಗಾರ ಅವರು ಜೀವನ ಸಾಧನೆ ಕುರಿತು ಕಿರು ಭಾಷಣ ಮಾಡಿದರು ಇದಕ್ಕೂ ಮುನ್ನ ನಗರದ ಗಾಂಧಿ ವೃತ್ತದಲ್ಲಿ ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಮತದಾರರ ಮಹತ್ವದ ಕುರಿತು ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಔದ್ರಾಮ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆನ್ನೂರ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಟೆ  ತಹಶೀಲ್ದಾರ ಮೋಹನ ಕುಮಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೂಜಾರಿ, ಸಿ.ಬಿ.ಕುಂಬಾರ, ಅಲ್ಲಾಪೂರ ಹಾಗೂ ಇತರರು ಉಪಸ್ಥಿತರಿದ್ದರು.