ವಿಜಯಪುರ : ಭಾರತ ಸರ್ವಜನಾಂಗದ ಶಾಂತಿಯ ತೋಟ, ಇದನ್ನು ಮೋದಿ, ಶಹಾ ಅರ್ಥ ಮಾಡಿಕೊಳ್ಳಲಿ : ಕುಂ.ವೀರಭದ್ರಪ್ಪ

(ಕವಿ ಶಂ.ಗು. ಬಿರಾದಾರ ವೇದಿಕೆ)

ವಿಜಯಪುರ 30 : ಭಾರತ ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಸಾವಿರಾರು ಜಾತಿಗಳಿವೆ, ಧರ್ಮಗಳಿವೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ನೃಪತುಂಗ ಪ್ರಸಸ್ತಿ ಪುರಸ್ಕೃತ ಡಾ. ಕುಂ. ವೀರಭದ್ರಪ್ಪ ಹೇಳಿದರು.

ವಿಜಯಪುರ ಜಿಲ್ಲೆಯ ನೂತನ ತಾಲೂಕು ಕೇಂದ್ರವಾದ ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಗುರುವಾರ ನಡೆದ ಪ್ರಥಮ ಬಬಲೇಶ್ವರ ತಾಲೂಕು ಪ್ರಥಮ  ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ದೇಶ ಒಂದೇ ಧರ್ಮ ಇರಬೇಕೆಂದು ಹೇಳುವುದು ಎಷ್ಟು ಸರಿ? ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ದೇಶದ ಸರ್ವತೋಮುಖ ಪ್ರಗತಿಗೆ ಎಲ್ಲ ಸಮುದಾಯದವರು ಕೊಡುಗೆ ನೀಡಿದ್ದಾರೆ. ಇಂಡಿಯಾ ಗೇಟ್ನಲಿ ನಮೂದಿಸಿರುವ ಲಕ್ಷಾಂತರ ಸಂಖ್ಯೆಯ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳಲ್ಲಿ  ಶೇ.60 ಕ್ಕೂ ಹೆಚ್ಚು ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳಿವೆ. ದೇಶದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆ ದೊಡ್ಡದಿದೆ. ಹೀಗಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಮೂಲಕ ಆ ಸಮುದಾಯದವರಲ್ಲಿ ಆತಂಕ ಸೃಷ್ಟಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು. 

ಈಗಿನ ಸರಕಾರ ಸಾಹಿತ್ಯ-ಸಂಸ್ಕೃತಿಯನ್ನು ಕೇಸರಿಮಯ ಮಾಡುವ ದಾರಿಯಲ್ಲಿ ಸಾಗುತ್ತಿದೆ. ಇದು ಅಪಾಯಕಾರಿ ಸಂಗತಿ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

    ಹಳ್ಳಿಗಳು ಒಂದು ರೀತಿಯ ವೃದ್ಧಾಶ್ರಮಗಳಾಗಿ ಪರಿವರ್ತನೆಯಾಗಿವೆ, ಹಳ್ಳಿಗಳನ್ನು ವೃದ್ಧಾಶ್ರಮಗಳನ್ನಾಗಿ ಪರಿವತರ್ಿಸಿದ ಕೀತರ್ಿ ಇಂಗ್ಲೀಷ್ ಭಾಷೆಗೆ ಸಲ್ಲುತ್ತದೆ. ಇಂಗ್ಲೀಷ ಭಾಷೆ ಸಮುದಾಯ ಹಾಗೂ ಸಂಬಂಧಗಳನ್ನು ಒಡೆಯುತ್ತದೆ. ಕನ್ನಡ ಅದನ್ನು ಒಗ್ಗೂಡಿಸುತ್ತದೆ. ಕಾರಣ ಮಾತೃಭಾಷೆ ಕನ್ನಡದಲ್ಲಿಯೇ ತಮ್ಮ ಮಕ್ಕಳಿಗೆ ಒಂದರಿಂದ ಹತ್ತನೇ ತರಗತಿವರೆಗೆ ಓದಿಸಬೇಕು. ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮತನಾಡಬೇಕು. ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

   ದೇಶದಲ್ಲಿ ಇಂದು ವೃದ್ಧಾಶ್ರಮಗಳ ಸಂಖ್ಯೆಯೂ ಇಂದು ಹೆಚ್ಚಿದೆ. ಅಲ್ಲಿರುವ ವಯೋವೃದ್ಧರು ಯಾರೂ ಅನಾಥರಲ್ಲ. ಮಕ್ಕಳನ್ನು ಇಂಗ್ಲೀಷ್ ಕಲಿಸಿದ ಪರಿಣಾಮ ಅವರು ವಿದೇಶಕ್ಕೆ ಹೋಗಿದ್ದರಿಂದ ಅವರು ವೃದ್ಧಾಶ್ರಮ ಸೇರುವಂತಾಗಿದೆ ಎಂದು ಅವರು ನುಡಿದರು.

      ಕನ್ನಡ ಭಾಷೆಯ ಬೇರು ಉತ್ತರ ಕರ್ನಾಟಕದಲ್ಲಿ ಬಹಳ ಗಟ್ಟಿಯಾಗಿದೆ. ಕನ್ನಡ ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದೆ. ಮಕ್ಕಳಿಗೆ ಮಮ್ಮಿ, ಡ್ಯಾಡಿ ಸಂಸ್ಕೃತಿ ಕಲಿಸುವುದು ಬೇಡ. ಆಚಿಟಿ-ಅಂಕಲ್ ಪದಗಳನ್ನು ಉಚ್ಛಾಟಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

    ಕನ್ನಡ ಭಾಷೆಗೆ ಎಂದೂ ಅಳಿವಿಲ್ಲ, ಕನ್ನಡಿಗರು ಎಲ್ಲಿಯವರೆಗೆ ಇರುತ್ತಾರೆ ಅಲ್ಲಿಯವರೆಗೆ ಕನ್ನಡ ಭಾಷೆ ಇದ್ದೇ ಇರುತ್ತದೆ. ಕನ್ನಡ ಭಾಷೆಯಷ್ಟು ಸುಂದರ ಭಾಷೆ ಇನ್ನೊಂದಿಲ್ಲ, ಕನ್ನಡ ಭಾಷೆ ಮಾತನಾಡುವುದೇ ಒಂದು ಪುಣ್ಯ, ಆದರೆ ಕನ್ನಡ ಭಾಷೆ ಅಳಿಯುತ್ತದೆ ಎಂದು ಹೇಳುವವರು ನಿಜವಾಗಿಯೂ ಮುಠ್ಠಾಳರು ಎಂದು ಅವರು ಕಿಡಿಕಾರಿದರು.

    ಭಾಷೆಗಳ ಅಳಿವಿನಂಚಿನಲ್ಲಿ ಕನ್ನಡವೇ ಮುಂಚೂಣಿ ಸ್ಥಾನದಲ್ಲಿದೆ ಎಂದು ಹೇಳುವ ಕೆಲವು ಮುಠ್ಠಾಳರು ಕನ್ನಡ ಭಾಷೆ ಹಾಗೂ ಕನ್ನಡ ಮಾತನಾಡುವ ಕನ್ನಡಿಗರ ಬಗ್ಗೆ ತಿಳಿಯಬೇಕಾದರೆ ಇಂಥ ಸಾಹಿತ್ಯ ಸಮ್ಮೇಳನಗಳಿಗೆ ಹಾಗೂ ಗ್ರಾಮೀಣ ಪ್ರದೇಶಕ್ಕೆ ಅವರು ಬಂದರೆ ಗೊತ್ತಾಗುತ್ತದೆ ಎಂದರು.   

   ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಬಲೇಶ್ವರ ಕ್ಷೇತ್ರದ ಶಾಸಕ, ಮಾಜಿ ಜಲಸಂಪನ್ಮೂಲ ಸಚಿವ ಡಾ. ಎಂ.ಬಿ.ಪಾಟೀಲ ಮಾತನಾಡಿ, ಕನ್ನಡದಲ್ಲಿ ವಚನಗಳನ್ನು ಬರೆಯುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಿದವರು ಬಸವಾದಿ ಶರಣರು ಎಂಬುದನ್ನು ನಾವು ಯಾರು ಮರೆಯಬಾರದು. ವಸನ ಪಿತಾಮಹ ಡಾ. ಪ.ಗು.ಹಳಕಟ್ಟಿ ಅವರು ಇರದೇ ಹೋಗಿದ್ದರೆ ಇಂದು ನಮಗೆ ಬಸವಾದಿ ಶರಣರ ಬಗ್ಗೆ ಹಾಗೂ ಅವರ ವಚನ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ವಚನ ಸಾಹಿತ್ಯಕ್ಕೆ ಹಳಕಟ್ಟಿ ಅವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರನ್ನು ನಾವು ಸ್ಮರಿಸಬೇಕು ಎಂದು ಅವರು ಹೇಳಿದರು.

     ಹಿರಿಯ ಸಾಹಿತಿ ಭಾರತೀ ಪಾಟೀಲ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.  ಬಬಲೇಶ್ವರ ಬೃಹನ್ಮಠದ ಪಟ್ಟಾಧ್ಯಕ್ಷರಾದ ಡಾ.ಮಹಾದೇವ ಶಿವಾಚಾರ್ಯರು, ಮಮದಾಪೂರ ವಿರಕ್ತಮಠದ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ, ನಿಡೋಣಿ ವಿರಕ್ತಮಠದ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. 

      ಇದೇ ಸಂದರ್ಭದಲ್ಲಿ ಸಮ್ಮೇಳನದ ಅಂಗವಾಗಿ ಹೊರತಂದಶಾಂತಪ್ರಭೆ ಸ್ಮರಣ ಸಂಚಿಕೆಯನ್ನು ಜಿಲ್ಲಾ ಪಂಛಾಯ್ತಿ ಮಾಜಿ ಅಧ್ಯಕ್ಷ ವ್ಹಿ.ಎಸ್.ಪಾಟೀಲ ಹಾಗೂ ಲೇಖಕ ಸಿದ್ದಪ್ಪ ಹೊಸಮನಿ ಅವರು ಬರೆದ ಭಾವತರಂಗ ಕೃತಿಯನ್ನು ಹಿರಿಯರಾದ ವ್ಹಿ.ಎನ್.ಬಿರಾದಾರ ಅವರು ಲೋಕಾರ್ಪಣೆ ಮಾಡಿದರು.

        ಬಬಲೇಶ್ವರ ತಾಲೂಕಾ ಕಸಾಪ ಅಧ್ಯಕ್ಷ ಪ್ರೊ.ಮಹಾದೇವ ರೆಬಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ ಆಶಯ ನುಡುಗಳನ್ನಾಡಿದರು. 

     ಜಿಲ್ಲಾ ಪಂಚಾಯ್ತಿ ಸದಸ್ಯರಾದ ಉಮೇಶ ಕೋಳಕೂರ,  ಸುಜಾತಾ ಕಳ್ಳಿಮನಿ, ಶ್ರೀಮತಿ ದಾನಮ್ಮ ಅಂಗಡಿ, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಸಂಗಮೇಶ ಬಬಲೇಶ್ವರ, ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ, ಶಾಶ್ವತ ಪಾಟೀಲ, ಜಿ.ಪಂ. ಮಾಜಿ ಸದಸ್ಯ ಮಲ್ಲು ಕನ್ನೂರ, ಕೆಓಎಫ್ ನಿರ್ದೇಶಕ ದೇವಾನಂದ ಆಲಗೊಂಡ, ತಹಶೀಲದಾರ ಎಂ.ಎಸ್.ಅರಕೇರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಭೌರಮ್ಮ ಬೂದಿಹಾಳ, ಎಪಿಎಂಸಿ ಸದಸ್ಯ ಹಣಮಂತ ಲೋಕುರಿ, ಅಜರ್ುನ ದೇವಕ್ಕಿ ಮುಂತಾದ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.

  ಪ್ರೊ. ಮಲ್ಲಿಕಾರ್ಜುನ ಅವಟಿ ಸ್ವಾಗತಿಸಿದರು. ಪ್ರೊ.ಮಲ್ಲಿಕಾರ್ಜುನ ಅವಟಿ ಅತಿಥಿಗಳನ್ನು ಪರಿಚಯಿಸಿದರು. ಮುರುಗೇಶ ಸಂಗಮ ಕಾರ್ಯಕ್ರಮ ನಿರೂಪಿಸಿದರು. ಬಸನಗೌಡ ಬಿರಾದಾರ ವಂದಿಸಿದರು.