ವಿಜಯಪುರ: ವಿದ್ಯಾರ್ಥಿಗಳಿಗೆ 'ಕರ್ನಾಟಕ ದರ್ಶನ' ಪ್ರವಾಸಕ್ಕೆ ಚಾಲನೆ

ಲೋಕದರ್ಶನ ವರದಿ

ವಿಜಯಪುರ 18: 2019-20ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಇತರೆ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿರುವ 'ಕರ್ನಾಟಕ ದರ್ಶನ' ಪ್ರವಾಸ ಕಾರ್ಯಕ್ರಮಕ್ಕೆ ಇಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಒಟ್ಟು 793 ವಿದ್ಯಾರ್ಥಿಗಳು ಪ್ರವಾಸ ಕೈಗೊಂಡಿದ್ದು, ದಿನಾಂಕ:17.01.2020 ರಿಂದ 21.01.2020ರವರೆಗೆ ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಐಹೊಳೆ, ಪಟ್ಟದಕಲ್ಲು, ಬಾದಾಮಿ, ಮುರುಡೇಶ್ವರ, ಬನವಾಸಿ, ಗೋಕರ್ಣ, ಶಿರಸಿ, ಜೋಗ್ ಫಾಲ್ಸ್ ಮುಂತಾದ ಸ್ಥಳಗಳಿಗೆ ಭೇಟಿ ನೀಡುವರು. ವಸತಿ, ಸಾರಿಗೆ ಜೊತೆಗೆ ಪ್ರವಾಸಿ ಗೈಡ್ ವ್ಯವಸ್ಥೆಯನ್ನು ಕೆ.ಎಸ್.ಟಿ.ಡಿ.ಸಿ. ಮೂಲಕ ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಹೇಳಿದರು.

ನಗರದ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಅವರ ಕಚೇರಿಯ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಬಜಂತ್ರಿ ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಸಿ.ಪ್ರಸನ್ನಕುಮಾರ್ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಷರೀಫ್ ನದಾಫ್, ಎಸ್. ಹತ್ತಳ್ಳಿ, ಎಸ್.ಸಿ.ಘನಶೆಟ್ಟಿ, ಎಸ್.ಎ.ಮುಜಾವರ, ಆರ್.ಬಿ.ಉಪಾಸೆ, ಹೆಚ್.ಮಮದಾಪುರ ಹಾಗೂ ಕೆ.ಎಸ್.ಟಿ.ಡಿ.ಸಿ.  ವ್ಯವಸ್ಥಾಪಕ ರಮೇಶಕುಮಾರ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.