ಲೋಕದರ್ಶನ ವರದಿ
ವಿಜಯಪುರ 23: ಜನತಾ ಟಾಕೀಸ್ ಸಂಸ್ಥೆಯಿಂದ ನಿರ್ಮಾಣ ಮಾಡಿದ ಹೊಸ ಕನ್ನಡ ಚಲನಚಿತ್ರ "ಆನೆಬಲ" ಬರುವ ಫೆಬ್ರುವರಿಯಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿದೇರ್ಶಕ ರಾಜು ಸೂನಗನಹಳ್ಳಿ ತಿಳಿಸಿದರು.
ವಿಜಯಪುರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಯುವಕರ ಪಡೆಯೊಂದು ಓದಿನ ಜೊತೆಯಲ್ಲಿ ತುಂಟತನ, ತಮಾಷೆಯೊಂದಿಗೆ ತಮ್ಮ ಗ್ರಾಮದಲ್ಲಿ ನಡೆಯುವ ರಾಗಿಮುದ್ದೆ ಸ್ಪಧರ್ೆಯಲ್ಲಿ ಹೇಗೆ ಪಾಲ್ಗೊಳ್ಳುತ್ತಾರೆ ಎನ್ನುವ ಕಥಾವಸ್ತು ಆಧರಿಸಿ ಮಂಡ್ಯ ನೆಲದ ಭಾಷಾ ಶೈಲಿಯಲ್ಲಿ ಹೆಣೆದಿರುವ ಚಿತ್ರ ಇದಾಗಿದ್ದು, ಜಾನಪದ ಸಂಸ್ಕೃತಿ, ಸೋಬಾನ ಪದಗಳ ಬಳಕೆ, ಗ್ರಾಮ ಸೌಂದರ್ಯವನ್ನು ಬೇರೆ ಆಯಾಮದಲ್ಲಿ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ ಎಂದರು.
ಎರಡು ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಸುತ್ತ-ಮುತ್ತ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಫೆಬ್ರುವರಿ ಮೊದಲ ವಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಈ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಿನಿಮಾ ಎರಡು ಗಂಟೆಗಳ ಅವಧಿಯದಾಗಿದ್ದು, ನಾಲ್ಕು ಹಾಡುಗಳಿವೆ. ಈ ಚಿತ್ರದಲ್ಲಿನ ಮುದ್ದೆ ಮುದ್ದೆ ಹಾಡು ಮತ್ತು ಮಳವಳ್ಳಿ ಜಾತ್ರೇಲಿ ಹಾಡುಗಳು ಯುಟ್ಯೂಬ್ನಲ್ಲಿ ಹಿಟ್ ಆಗಿವೆ. ಲೂಸಿಯಾ ಯೂಟರ್ನಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎವಿ.ವೇಣುಗೋಪಾಲ್ ಅವರು ನಿರ್ಮಾಪಕರಾಗಿದ್ದಾರೆ. ನಟ ಸಾಗರ, ನಟಿ ರಕ್ಷಿತ, ಮಲ್ಲರಾಜು, ಚೀರಂಜಿವಿ, ಹರೀಶ ಶೆಟ್ಟಿ, ಗೌತ್ಮ್, ಮುತ್ತುರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ಗೌರಮ್ಮ ಶಂಭೂಗೌಡ ಸೇರಿದಂತೆ 120ಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಇದರಲ್ಲಿ ಶೇ. 90 ರಷ್ಟು ಕಲಾವಿದರು ಹೊಸಬರೇ ಇದ್ದಾರೆ ಎಂದು ಅವರು ವಿವರಿಸಿದರು.
ಹೊಸ ಪ್ರಯತ್ನದೊಂದಿಗೆ ಈ ಚಿತ್ರ ಮೂಡಿಬರುತ್ತಿದ್ದು, ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುವ ಸದಭಿರುಚಿಯ ಚಿತ್ರ ಇದಾಗಿದೆ. ಎಲ್ಲರೂ ಈ ಚಿತ್ರವನ್ನು ನೋಡಬೇಕು ಎಂದರು.
ಚಿತ್ರದ ನಾಯಕ ನಟ ಸಾಗರ, ವಿಶ್ವನಾಥ ಕೋರಿ, ಹಾಗೂ ತಂಡದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.