ಲೋಕದರ್ಶನ ವರದಿ
ವಿಜಯಪುರ 12: ಸಾರ್ವಜನಿಕರು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಜೊತೆಗೂಡಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೆ ಸಾಮೂಹಿಕವಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ರವೀಂದ್ರ ಕಾರಬಾರಿ ಅವರು ಹೇಳಿದರು.
ನಗರದ ಸಿದ್ದೇಶ್ವರ ಕಲಾಭವನದಲ್ಲಿಂದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಎಲ್ಲ ಇಲಾಖೆಗಳು ಒಟ್ಟುಗೂಡಿ, ಶಿಕ್ಷಣದಿಂದ ವಂಚಿತರಾದ 14 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ತಾಲೂಕಾ ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು. ನನ್ನ ನಡೆ ಶಾಲೆಯ ಕಡೆ ಎಂಬ ಘೋಷವಾಕ್ಯದಡಿಯಲ್ಲಿ ಬಾಲಕಾರ್ಮಿಕ ಪದ್ಧತಿಗೆ ಒಳಪಟ್ಟಂತಹ ಮಕ್ಕಳ ಪೋಷಕರಿಗೆ ಮನವೊಲಿಸುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮ ವಹಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ರುದ್ರೇಶ ಅವರು ಮಾತನಾಡಿ, ಈ ಬಾಲಕಾಮರ್ಿಕ ಪದ್ಧತಿಯು ನೂರಾರು ವರ್ಷಗಳಿಂದ ರೂಢಿಯಲ್ಲಿರುವ ಒಂದು ಪಿಡುಗಾಗಿದ್ದು, ಇದು ವಾಸಿ ಮಾಡದ ಗಾಯದಂತೆ ಬೆಳೆಯುತ್ತಿದೆ. ಈ ಗಾಯಕ್ಕೆ ಶಿಕ್ಷಣವೊಂದೆ ಮೂಲ ಮದ್ದಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಮತ, ಪಥ, ವರ್ಗ, ಕನಿಷ್ಠ, ಗರಿಷ್ಠ ಎನ್ನದೇ ಈ ಪಿಡುಗಿಗೆ ಬಲಿಯಾದವರನ್ನು ರಕ್ಷಿಸಿ ಉತ್ತಮ ಶಿಕ್ಷಣವಂತರನ್ನಾಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ ಅವರು ಮಾತನಾಡಿ, ಕೆಳಸ್ಥರದಲ್ಲಿ ಇರುವಂತಹ ಹಾಗೂ ಶಿಕ್ಷಣದಿಂದ ವಂಚಿತ ಮಕ್ಕಳ ರಕ್ಷಣೆ, ಕೇವಲ ದಿನಾಚರಣೆಗಳಿಗೆ ಮಾತ್ರ ಸೀಮಿತಗೊಳಿಸದೇ ಜಿಲ್ಲಾಡಳಿತ ಹಾಗೂ ಎಲ್ಲ ಇಲಾಖೆಗಳು ಸೇರಿ ವರ್ಷದ 365 ದಿನಗಳೂ ಕೂಡ ಕಾರ್ಯಪ್ರವೃತ್ತರಾಗಿ ಇಂತಹ ಕೆಟ್ಟ ಪದ್ಧತಿಗೆ ಒಳಗಾದ ಮಕ್ಕಳನ್ನು ರಕ್ಷಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರುದ್ರೇಶ ಬಾಲಕಾರ್ಮಿಕ ಪದ್ಧತಿ ವಿರೋಧ ಅಂಗವಾಗಿ ಪ್ರತಿಜ್ಞಾ ಬೋಧಿಸಿದರು. ಇದಕ್ಕೂ ಮೊದಲು ನಗರದ ಸರಕಾರಿ ಪದವಿಪೂರ್ವ ಕಾಲೇಜ್ದಿಂದ ಆರಂಭಗೊಂಡ ಜಾಥಾಕ್ಕೆ ನ್ಯಾಯಾಧೀಶ ಎಸ್.ಎನ್. ನಾಯಕ ಅವರು ಚಾಲನೆ ನೀಡಿದರು.
ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸಿ.ಬಿ.ಕುಂಬಾರ, ನಿರ್ಮಲಾ ಸುರಪುರ, ಶ್ರೀಧರ ಕುಲಕರ್ಣಿ, ಶ್ರೀನಿವಾಸ ವಾಲೀಕಾರ, ಎಂ.ಎಚ್.ಖಾಸನೀಸ, ಅಶೋಕ ಹಂಚಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.