ಲೋಕದರ್ಶನ ವರದಿ
ವಿಜಯಪುರ 21: ನಿಜಶರಣ ಅಂಬಿಗರ ಚೌಡಯ್ಯ 12ನೇ ಶತಮಾನದ ಬಸವಾದಿ ಶರಣರಲ್ಲಿ ಅಗ್ರಗಣ್ಯರು. ಅವರು ಬರೆದ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು. ಅಂಬಿಗರ ಚೌಡಯ್ಯನವರು ತಮ್ಮದೆ ಶೈಲಿಯಲ್ಲಿ ವಚನಗಳನ್ನು ರಚಿಸಿ ನಿಜಶರಣ ಎಂದು ಕರೆಯಿಸಿಕೊಂಡವರು ಎಂದು ಅಪರ ಜಿಲ್ಲಾಧಿಕಾರಿ ಔದ್ರಾಮ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದು ನಡೆದ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಗರ ಚೌಡಯ್ಯ ಬಸವಾದಿ ಕಾಲದ ಶರಣರಲ್ಲಿ ಅತ್ಯಂತ ಪ್ರಮುಖರಾಗಿದ್ದು ಅನೇಕ ಜನ ಚೌಡಯ್ಯ ಎಂಬ ಹೆಸರಿನ ಶರಣರು ನೆಲೆಸಿದ್ದರೂ ಅವರಲ್ಲಿ ವಿಶೇಷರಾಗಿ ಅಜರಾಮರರಾದವರು ಅಂಬಿಗರ ಚೌಡಯ್ಯನವರು. ಅವರ ವಚನಗಳು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದರು.
ಅಂಬಿಗರ ಚೌಡಯ್ಯನವರು ತಮ್ಮ ವಚನಗಳಲ್ಲಿ ಕಂಡಿದ್ದು ಕಂಡಹಾಗೆ ಹೇಳಿದ್ದು ಸಮಾಜದ ಬೇಧ-ಭಾವಗಳನ್ನು ಹೊರಹಾಕಲು ಪ್ರಯತ್ನಿಸಿದ್ದಾರೆ, ಅವರು ಬರೆದ ಸಾವಿರಾರು ವಚನಗಳಲ್ಲಿ ಕೆಲವೆ ವಚನಗಳು ಸಿಕ್ಕಿದ್ದು ವಚನ ಪಿತಾಮಹ ಫ.ಗು. ಹಳಕಟ್ಟಿ ಯವರು ಅಂಬಿಗರ ಚೌಡಯ್ಯನವರ ಸುಮಾರು 150 ವಚನಗಳ ಹುಡುಕಿ ಹೊರತಂದು ಅದನ್ನು ಸಮಾಜಕ್ಕೆ ನೀಡಿದ್ದಾರೆ. ಅವುಗಳ ಸಾರಾಂಶವನ್ನು ಇಂದು ಪ್ರಚಾರ ಮಾಡುವ ಅವಶ್ಯಕತೆ ಇದೆ. ಅವರ ವಚನಗಳು ಎಲ್ಲರಿಗೆ ಮುಟ್ಟಬೇಕಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಸಿಂದಗಿಯ ಗುರುದೇವಮಠದ ಶಾಂತಗಂಗಾಧರ ಸ್ವಾಮೀಜಿಯವರು ಮಾತನಾಡಿ ಅಂಬಿಗರ ಚೌಡಯ್ಯ ಅವರ ವಚನಗಳು ತುಂಬಾ ಗಂಭಿರ ವಚನಗಳಾಗಿದ್ದು, ಒಟ್ಟು ಐದು ರೀತಿಯ ವಚನಗಳನ್ನು ರಚಿಸಿದ್ದಾರೆ. ಭಕ್ತಿಯ ವಚನಗಳು, ನೀತಿಯ ವಚನಗಳು, ತತ್ವಜ್ಞಾನದ ವಚನಗಳು, ಕಾಲಜ್ಞಾನದ ವಚನಗಳು ಹೀಗೆ ಎಲ್ಲ ಕ್ಷೇತ್ರದ ಬಗ್ಗೆ ಅವರು ವಚನಗಳನ್ನು ರಚಿಸಿದ್ದು ಯಾವುದೇ ಒಂದು ಕ್ಷೇತ್ರದ ವಚನಗಳಿಗೆ ಸೀಮೀತವಾಗಿರದ ಅಂಬಿಗರ ಚೌಡಯ್ಯನವರು ಕರುನಾಡು ಕಂಡ ಶ್ರೇಷ್ಠ ಶರಣರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಸಾಹಿತಿ ಹಾಗೂ ಹವ್ಯಾಸಿ ಕಲಾವಿದರಾದ ದುಂಡಪ್ಪ ಕೊಠಾರಿ ಅವರಿಗೆ ಜಿನೇವಾ ದೇಶದಿಂದ ಮಾನ್ಯತೆ ಪಡೆದ 'ಬಾರತ ವರ್ಚುವಲ್ ಯುನಿರ್ವಸಿಟಿ ಫಾರ್ ಪೀಸ್ ಎಜುಕೇಷನ್ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಲಭಿಸಿದಕ್ಕೆ ನಿಜಶರಣ ಮಹಿಳಾ ಪತ್ತಿನ ಸಹಕಾರಿ ಸಂಘದ ವತಿಯಿಂದ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.
ರಂಗ ಮೆಳ ಕಲಾಸಂಸ್ಥೆಯ ಕಲಾವಿದರಿಂದ ನಿಜ ಶರಣ ಅಂಬಿಗರ ಚೌಡಯ್ಯ ಎಂಬ ನಾಟಕ ಪ್ರದರ್ಶನ ಮಾಡಿದರು. ಖ್ಯಾತ ಗಾಯಕಿ ಮಂಜುಳಾ ದತ್ತಾತ್ರೆಯ ಹಿಪ್ಪರಗಿ ಅವರು ಸುಗಮ ಸಂಗೀತಗಾಯನ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸೃತಿ ಇಲಾಖೆಯ ಸಹಾಯಕ ನಿದರ್ೇಶಕ ಮಹೇಶ ಪೋತದಾರ, ದೈಹಿಕ ಶಿಕ್ಷಣಾಧಿಕಾರಿ ಗಂಗಶೆಟ್ಟಿ , ನಿಜ ಶರಣ ಅಂಬಿಗರ ಚೌಡಯ್ಯ ಸಮಿತಿ ಜಿಲ್ಲಾಧ್ಯಕ್ಷರಾದ ಶರಣಪ್ಪ ಕನಮೇಶ್ವರ, ಸೇರಿದಂತೆ ಸಮಾಜದ ಹಿರಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಇತರರಿದ್ದರು.