ಬೆಂಗಳೂರು 15: ಕನ್ನಡ ಚಿತ್ರರಂಗದ ಹಿರಿಯ ನಟ, ರಂಗನಿರ್ದೇಶಕ ಸರಿಗಮ ವಿಜಿ ಬುಧವಾರ ನಿಧನ ಹೊಂದಿದ್ದಾರೆ.
ವಿಜಿ ಅವರಿಗೆ ಶ್ವಾಸಕೋಶದ ಸಮಸ್ಯೆ ಎದುರಾಗಿತ್ತು. ಯಶಂಪುರದ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನ್ಯುಮೋನಿಯಾಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ವಿಜಿ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಸರಿಗಮ ವಿಜಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜನವರಿ 16 ಬೆಳಿಗ್ಗೆ ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಬರುವ ಚೀತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.
ವಿಜಿ ಅವರದ್ದು ಬಲು ಸುದೀರ್ಘವಾದ ಸಿನಿಮಾ ಮತ್ತು ರಂಗಭೂಮಿ ಪಯಣ. ನಾಟಕಗಳಲ್ಲಿ ನಟಿಸುತ್ತಿದ್ದ ವಿಜಿ ಅವರ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಹೆಸರು ಕೊಟ್ಟಿತ್ತು. ಇದೇ ಕಾರಣಕ್ಕೆ ಅವರಿಗೆ ಸರಿಗಮ ವಿಜಿ ಹೆಸರು ಬಂದಿತ್ತು. ನಾಟಕದಿಂದ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ವಿಜಿ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರ ಕೆಲವೆಡೆ ವಿಲನ್ ಪಾತ್ರಗಳಲ್ಲಿಯೂ ನಟಿಸಿದ್ದಾರೆ.
1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳುವಳದ ಮಡಿಲಲ್ಲಿʼ ಚಿತ್ರದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿ ಸಿನಿಮಾ ಲೋಕಕ್ಕೆ ಕಾಲಿಟ್ಟ ಅವರು ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದಾರೆ.
ನಟನೆ ಮಾತ್ರವಲ್ಲದೆ ಸುಮಾರು 80 ಚಿತ್ರಗಳಿಗೆ ವಿಜಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಿರುತೆರೆಯಲ್ಲಿ 2,400 ಧಾರಾವಾಹಿಗಳ ನಿರ್ದೇಶನದ ಜೊತೆಗೆ ನಟನೆ ಮಾಡಿರುವುದು ಅವರ ನಟನಾ ಪ್ರತಿಭೆಯ ಸಾಧನೆ.
ಟೈಗರ್ ಪ್ರಭಾಕರ್ ಜತೆಗಿನ ಸಿನಿಮಾಗಳಲ್ಲೇ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಚಿತ್ರರಂಗಕ್ಕೆ ಬಂದ ಬಳಿಕ ವಿಜಯ್ ಸರಿಗಮ ವಿಜಿಯಂದೇ ಜನಪ್ರಿಯರಾಗಿದ್ದಾರೆ ಅದಕ್ಕೆ ಕಾರಣವಾಗಿದ್ದು, ವಿಜಿ ಅವರ ನಿರ್ದೇಶನದ “ಸಂಸಾರದಲ್ಲಿ ಸರಿಗಮ ಎಂಬ ನಾಟಕ ನಿರ್ದೇಶಿಸಿದ್ದು, ಅದು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ 1,300ಕ್ಕೂ ಅಧಿಕ ಪ್ರದರ್ಶನ ಕಂಡಿತ್ತು. ನಂತರ ಇವರು ಸರಿಗಮ ವಿಜಿ ಎಂದೇ ಜನಪ್ರಿಯರಾಗಿದ್ದರು. ಹಾಸ್ಯ ಪಾತ್ರಗಳಿಂದ ಅವರು ಪ್ರೇಕ್ಷಕರ ಮನಗೆದ್ದಿದ್ದರು.
ಕೊನೆಯದಾಗಿ ಅವರು ʼಡಕೋಟಾ ಪಿಕ್ಚರ್ʼ ಚಿತ್ರದಲ್ಲಿ ನಟಿಸಿದ್ದರು. ರಂಗಕರ್ಮಿಯಾಗಿಯೂ ಜನಪ್ರಿಯ: ವಿಜಿ ಸಿನಿಮಾದಲ್ಲಿ ಮಾತ್ರವಲ್ಲದೆ ರಂಗಭೂಮಿಯಲ್ಲೂ ಹೆಚ್ಚು ಪರಿಚಿತರಾದವರು. ಅವರ ʼಸಂಸಾರದಲ್ಲಿ ಸರಿಗಮʼ ಎನ್ನುವ ರಂಗಭೂಮಿ ನಾಟಕ 1390ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡು ಜನಪ್ರಿಯತೆ ಪಡೆದಿತ್ತು.