ವಾಷಿಂಗ್ಟನ್,
ಏ೧೮, ಮೆಕ್ಸಿಕೊ ಸೇರಿದಂತೆ ಇತರ ಹಲವು ದೇಶಗಳಿಗೆ ಕೊರೊನಾ
ವೈರಸ್ ರೋಗಿಗಳ ಚಿಕಿತ್ಸೆಗಾಗಿ ಅಗತ್ಯವಾಗಿರುವ ವೆಂಟಿಲೇಟರ್ ಗಳನ್ನು
ಪೂರೈಸಲಾಗುವುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಭರವಸೆ
ನೀಡಿದ್ದಾರೆ. ತಾವು ಈ ಸಂಬಂಧ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್
ಲೋಪೆಜ್ ಒಬ್ರಡಾರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಕೊರೊನಾ ರೋಗಿಗಳ
ಚಿಕಿತ್ಸೆಗಾಗಿ ವೆಂಟಿಲೇಟರ್ ಪೂರೈಸುವ ಭರವವಸೆ ನೀಡಿದ್ದೇನೆ ಎಂದು
ಅಧ್ಯಕ್ಷ ಟ್ರಂಪ್ ದೈನಂದಿನ ಮಾಧ್ಯಮಗೋಷ್ಟಿಯಲ್ಲಿ ಪ್ರಕಟಿಸಿದ್ದಾರೆ.ಮೆಕ್ಸಿಕೋ
ಸೇರಿದಂತೆ ಇತರ ಹಲವು ದೇಶಗಳಿಗೂ ವೆಂಟಿಲೇಟರ್ ಒದಗಿಸಲಾಗುವುದು. ವೆಂಟಿಲೇಟರ್
ಉತ್ಪಾದನೆಯಲ್ಲಿ ಅಮೆರಿಕಾ ಅಗ್ರಗಣ್ಯ ದೇಶವಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ
ಅವುಗಳ ತಯಾರಿಕೆ ನಡೆಯುತ್ತಿದೆ. ನಮ್ಮ ಬಳಿ ಸಾಕಷ್ಟು ಸಂಖ್ಯೆಯಲ್ಲಿರುವ ಕಾರಣ ನಮಗೆ
ಅಗತ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.ಅಮೆರಿಕಾ ತನಗೆ ಅಗತ್ಯವಿರುವಷ್ಟು
ಪ್ರಮಾಣದ ವೆಂಟಿಲೇಟರ್ ಗಳನ್ನು ಹೊಂದಿದೆ. ವಿಶ್ವದ ಇತರ ದೇಶಗಳ ಅಗತ್ಯ ಪೂರೈಸಲು,
ಲಕ್ಷಾಂತರ ವೆಂಟಿಲೇಟರ್ ಸಿದ್ದಪಡಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.