ನವದೆಹಲಿ, 10-ಪಶ್ಚಿಮ ಬಂಗಾಳ ವಿಧಾನಸಭೆ ಅಂಗೀಕರಿಸಿರುವ ಎಸ್‍ಸಿ-ಎಸ್‍ಟಿ ಮಸೂದೆಯನ್ನು ಅಲ್ಲಿನ ರಾಜ್ಯಪಾಲ
ಜಗದೀಪ್ ಧನ್‍ಕರ್ ತಡೆಹಿಡಿದಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸದಸ್ಯರು ರಾಜ್ಯಸಭೆಯಲ್ಲಿ ಪ್ರತಿಭಟಿಸುತ್ತಿರುವುದು
ಅಶಿಸ್ತಿನ ನಡಾವಳಿ ಎಂದು ರಾಜ್ಯಸಭೆ ಸಭಾಪತಿ ಎಂ ವೆಂಕಯ್ಯನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದನದ ಕಲಾಪ ಮುಂದೂಡುವ
ಮುನ್ನ ಪ್ರಶ್ನೋತ್ತರ ಕಲಾಪದ ಕೊನೆಯಲ್ಲಿ ಮಾತನಾಡಿದ ವೆಂಕಯ್ಯನಾಯ್ಡು, ‘ಕೆಲ ಸದಸ್ಯರು ಯಾವುದೇ ನೋಟಿಸ್
ನೀಡದೆ ಸಭಾಪತಿ ಪೀಠದ ಮುಂದಿನ ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿದ್ದಾರೆ. ಇದು ನೋವಿನ ಮತ್ತು ಬೇಸರದ
ಸಂಗತಿ.’ ಎಂದು ಹೇಳಿದರು.
‘ನಾವು ಸಂಸತ್‍ನಲ್ಲಿದ್ದೇವೆಯೋ ಇಲ್ಲ ಬೀದಿಯಲ್ಲಿದ್ದೇವೆಯೋ?’ ಎಂದು ನಾಯ್ಡು ಸಿಟ್ಟು ವ್ಯಕ್ತಪಡಿಸಿದರು.‘ಯಾರೊಬ್ಬರ ಮೇಲೂ ಸಿಟ್ಟಾಗುವುದು ನನಗೆ ಇಷ್ಟವಿಲ್ಲ. ನಿಮ್ಮಲ್ಲಿ ಕೆಲವರು ಹಿರಿಯರಿದ್ದಾರೆ. ಕೆಲವರು ನನ್ನ ಸ್ನೇಹಿತರೂ ಆಗಿದ್ದಾರೆ.’ ಎಂದು ಅವರು ಹೇಳಿದರು.
ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ
ತೃಣಮೂಲ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಸದನದಲ್ಲಿ ಸಂಸದರು ಪ್ರತಿಭಟನೆ ಮುಂದುವರೆಸಿದ್ದಂತೆ
ನಾಯ್ಡು ಅವರು ರಾಜ್ಯಸಭೆ ಟಿವಿಯ ಸದನದ ಕಲಾಪದ ನೇರಪ್ರಸಾರವನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.
ಇದನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದರು.