ಮಹಾಲಿಂಗಪುರ 13: ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ ಬಡವರ ಮನೆಗಳನ್ನು ರಬಕವಿ ಬನಹಟ್ಟಿ ತಾಲೂಕಾಡಳಿತ ಮಂಗಳವಾರ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಮಾಜಿ ಜಿಪಂ ಸದಸ್ಯೆ ವೀನಾ ಕಾಶಪ್ಪನವರ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಸ್ಥಳಕ್ಕೆ ಇಲ್ಲಿಯವರೆಗೆ ಭೇಟಿ ನೀಡದ ಶಾಸಕರ ಕ್ರಮವನ್ನು ತರಾಟೆಗೆ ತೆಗೆದುಕೊಂಡರು.
ಕೆಂಗೇರಿಮಡ್ಡಿ ಬಡಾವಣೆಯ 29/1 ಸರ್ವೆ ನಂಬರ್ ಕಂದಾಯ ಇಲಾಖೆ ಜಾಗೆಯಲ್ಲಿ 33 ಅನಧಿಕೃತ ಶೆಡ್ ಗಳ ತೆರವು ಕಾರ್ಯಾಚರಣೆಯನ್ನು ಇತ್ತಿಚೆಗೆ ತಾಲೂಕಾಡಳಿತ ಕೈಗೊಂಡಿತ್ತು. ಈ ಸ್ಥಳಕ್ಕೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಜನರ ದುಃಖ ದುಮ್ಮಾನಗಳನ್ನು ಆಲಿಸುವುದು ಜನಪ್ರತಿನಿಧಿಗಳ ಕೆಲಸವೇ ಹೊರತು ಅವರು ಕೇವಲ ಮತಗಳನ್ನು ಪಡೆಯುವ ಸಲುವಾಗಿ ಬಡವ, ಬಲ್ಲಿದರನ್ನು ಉಪಯೋಗಿಸಬಾರದು.
ಇವರು ಸರ್ವರ ಸೇವೆ ಜನಾರ್ದನನ ಸೇವೆ ಎನ್ನಬೇಕು. ಮನೆಗಳನ್ನು ಕಳೆದುಕ್ಕೊಂಡು ಈಗ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸೌಜನ್ಯಕ್ಕಾದರೂ ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದರೆ ಶಾಸಕ ಸ್ಥಾನಕ್ಕೊಂದು ಅರ್ಥ ಬರುತ್ತಿತ್ತು. ಇದನ್ನು ಮಾಡದೆ ಇರುವುದರಿಂದ ಜನಪ್ರತಿನಿಧಿ ಸ್ಥಾನಕ್ಕೆ ಚ್ಯುತಿ ಬಂದಂತಾಗಿದೆ ಎಂದರು.ಇಲ್ಲಿ ಚಿಕ್ಕ ಚಿಕ್ಕ ಮಕ್ಕಳು, ಬಾಣಂತಿಯರು, ವೃದ್ಧರು ಬಯಲಿಗೆ ಬಿದ್ದಿರುವ ದೃಶ್ಯ ನೋಡಿದರೆ ಮನ ಕಲಕುವಂತಿದೆ.
ತೆರವಿನ ನಂತರ ನಾನು ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ಕ್ರಮದ ಕುರಿತು ತಹಶೀಲ್ದಾರ್ ರಿಗೆ ಹೇಳೆ ಇಲ್ಲ ಎಂದರೆ, ಶಾಸಕ ಸಿದ್ದು ಸವದಿ ಅವರು ಮಾಧ್ಯಮಗಳ ಮೂಲಕ ಸರಿಯಾಗಿ ವಿಷಯದ ಬಗ್ಗೆ ಮಾತನಾಡಿಲ್ಲ ಇದನ್ನೆಲ್ಲ ನೋಡಿದರೆ ತೆರವಿಗಾಗಿ ಮಾನ್ಯ ತಹಶೀಲ್ದಾರ್ ರರು ಯಾವ ಮಾನದಂಡಗಳ ಮೇಲೆ ಕ್ರಮ ಕೈಗೊಂಡರು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದರು.
ಇರಲಿ ಮನೆ ಕಳೆದುಕೊಂಡವರಿಗೆ 2/3 ಗಂಟೆಗಳ ಕಾಲಾವಕಾಶವನ್ನಾದರೂ ನೀಡಿದ್ದರೆ ಮನೆ ಸಾಮಾನುಗಳ ಜೊತೆ ಶೆಡ್ ಗಳನ್ನು ತೆರವು ಗೊಳಿಸಿಕ್ಕೊಳ್ಳುತ್ತಿದ್ದರು ಎಂದು ತಹಶೀಲ್ದಾರ್ ಕಾರ್ಯ ವೈಖರಿ ಬಗ್ಗೆ ಕಿಡಿಕಾರಿದರು.ನಾನು ಯಾವತ್ತೂ ನಿಮ್ಮ ಜೊತೆ ಇದ್ದೇನೆ ಹೆದರಬೇಡಿ ನಾನು ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆ ನೀಡಿ, ಈ ಘಟನೆಗೆ ಸಂಬಂಧಿಸಿದಂತೆ ಎಸಿ ಮತ್ತು ತಹಶೀಲ್ದಾರ್ ಅವರು ಬೇರೆಡೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಸಂತ್ರಸ್ತರಿಗೆ ತಿಳಿಸಿದರು.
ಮೊನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಇಲಾಖೆ ಸಚಿವ ಬೈರೇಗೌಡರ ಭೇಟಿ ಮಾಡಿ ಗಮನಕ್ಕೆ ತಂದಿದ್ದು, ಅವರು ಸಹ ತೆರವು ಕಾರ್ಯಾಚರಣೆ ವಿಷಯಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರು, ಕಾರ್ಯಕರ್ತರು ಮತ್ತು ಸಂತ್ರಸ್ತರು ಇದ್ದರು. ಸಂತ್ರಸ್ತರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಶ್ರೀಮತಿ ವೀಣಾ ಕಾಶಪ್ಪನವರ್ ಮಾಡಿ ದುಃಖಿತರ ಜೊತೆ ಎರಡು ಗಂಟೆ ಕಾಲ ಕಳೆದು ಅವರಿಗೆ ಸೂರು ಕಲ್ಪಿಸುವ ಧೈರ್ಯ ತುಂಬಿದರು.