ಬೆಂಗಳೂರು, ಅ 15: ವಿಧಾನ ಮಂಡಲ ಅಧಿವೇಶನ ಕಲಾಪ ವರದಿಗಾರಿಕೆಯಿಂದ ಮಾಧ್ಯಮದವರನ್ನು ಹೊರಗಿಟ್ಟಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಬ್ಬ ಅವಿವೇಕಿ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಟೀಕಿಸಿದ್ದಾರೆ. ಬಿಜೆಪಿ ಸರ್ಕಾರದ ನಡೆ ಹಾಗೂ ಸ್ಪೀಕರ್ ತೀರ್ಮಾನ ಖಂಡಿಸಿ ಹಾಗೂ ಔರಾದ್ ಕರ್ ವರದಿ ಜಾರಿಗೆ ಒತ್ತಾಯಿಸಿ ನಗರದಲ್ಲಿಂದು ವಾಟಾಳ್ ನಾಗರಾಜ್ ಅವರು ಪೊಲೀಸ್ ಪೇದೆ ಧಿರಿಸು ಧರಿಸಿ ಕೈಯಲ್ಲಿ ಕ್ಯಾಮೆರಾ ಹಿಡಿದು ಎಂದಿನಂತೆ ವಿಭಿನ್ನ ಶೈಲಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಿಂದ ಮಾಧ್ಯಮಗಳನ್ನು ದೂರ ಇಟ್ಟಿದ್ದು ಪ್ರಜಾಪ್ರಭುತ್ವ ವಿರೋಧಿ ನೀತಿ. ಮಾಧ್ಯಮದವರ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಮತ್ತು ಅಧಿಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗಾಗಲೀ ಸ್ಪೀಕರ್ ಗಾಗಲೀ ಇಲ್ಲ. ಈ ಕೂಡಲೇ ತೀರ್ಮಾನವನ್ನು ಯಡಿಯೂರಪ್ಪ ಹಾಗೂ ಸ್ಪೀಕರ್ ಹಿಂಪಡೆಯಬೇಕೆಂದು ಒತ್ತಾಯಿಸಿದರು ತೀರಾ ನಿಕೃಷ್ಟವಾಗಿ ಬದುಕುತ್ತಿರುವ ಪೊಲೀಸರ ವೇತನವನ್ನು ಸರ್ಕಾರ ಪರಿಷ್ಕರಿಸಿ ಔರಾದ್ಕರ್ ವರದಿಯನ್ನು ಕೂಡಲೇ ಜಾರಿಗೆ ತಂದು ಆ ಮೂಲಕ ಪೋಲೀಸರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಕನ್ನಡ ಪರ ಹೋರಾಟಗಾರರ ಮತ್ತು ಸಂಘಟನೆ ಗಳ ಬೆಂಬಲದಿಂದ ಕರ್ನಾಟಕ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದರು.