ನೀನಿರದ ಬಾಳು ಸವಿಯಲ್ಲ ವಿಷದ ಕಾಡಾಗಿದೆ ನೋಡು ಈಗ
ನೀನಿರದ ಜಗ ಸ್ವರ್ಗವಲ್ಲ ಶೋಕದ ಗೂಡಾಗಿದೆ ನೋಡು ಈಗ
‘ಜೊತೆಯಿರದ ಬಾಳ ಜಾತ್ರೆಯಲಿ ಸೊಗಸೇನಿದೆ, ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ’ ಎಂದು ಕವಿ ಸುಬ್ರಾಯ ಚೊಕ್ಕಾಡಿ ಬರೆದಿದ್ದಾರೆ. ಹಾಗೆಯೇ ಸಂಗಾತಿ ಇರದ ಜೀವನ ವಿಷಾದದ ಮಡುವು ಹೆಪ್ಪುಗಟ್ಟಿದಂತೆ ಎನ್ನುವ ಕವಯಿತ್ರಿ ವಾಣಿ ಭಂಡಾರಿ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ, ಕವಿತೆ, ಭಾವಗೀತೆ, ಹನಿಗವಿತೆ, ಶಾಯರಿ, ಗಜಲ್ ಮುಂತಾದ ಸಾಹಿತ್ಯದ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ಹಿಂದೂಸ್ತಾನಿ ಸಂಗೀತ ಮತ್ತು ಸುಗಮ ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ವಿನಯವಾಣಿ ಪತ್ರಿಕೆಗೆ ‘ಮಲ್ನಾಡು ಕವಳ’ ಎಂಬ ಅಂಕಣ ಬರೆಯುತ್ತಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ‘ಸಂತನೊಳಗಿನ ಧ್ಯಾನ’ ಇವರ ಮೊದಲ ಗಜಲ್ ಕೃತಿಯಾಗಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದುಕೊಂಡಿದೆ. ರಾಜ್ಯಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ, ಲೇಖಕಿಯರ ಸಂಘದ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರಿ್ಡಸಿದ ಕಾರ್ಯಕ್ರಮಗಳಲ್ಲಿ ಕವಿತೆ, ಉಪನ್ಯಾಸಗಳನ್ನು ನೀಡಿದ್ದಾರೆ. ಆಕಾಶವಾಣಿಯಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. ದಸಾಪ ಗದಗ ಕೊಡಮಾಡಿದ ರಾಜ್ಯಮಟ್ಟದ ಗಜಲ್ ಕಾವ್ಯ ಪ್ರಶಸ್ತಿ, ಬಹುಮುಖ ಪ್ರತಿಭೆ ಪುರಸ್ಕಾರ ಸೇರಿದಂತೆ ಅನೇಕ ಸಮ್ಮಾನಗಳು ಇವರ ಸಾಹಿತ್ಯ ಸೇವೆಗೆ ಸಂದಿವೆ. ಇವರು ಬರೆದ ಗಜಲ್‌ನ ಓದು, ಅದು ಹೊಮ್ಮಿಸುವ ಒಳಾರ್ಥವನ್ನು ಗ್ರಹಿಸೋಣ.
ಗಜಲ್
ನೋವುಗಳೇ ತುಂಬಿ ನರಳುವಾಗ ಈ ಜೀವಕ್ಕೆಲ್ಲಿ ಸಮಾಧಾನ
ಅಪಮಾನಗಳೇ ಹೊತ್ತು ನಿಂತಿರುವಾಗ ಈ ಮನಸಿಗೆಲ್ಲಿ ಸಮಾಧಾನ
ನುಡಿದಂತೆ ನಡೆಯೇ ಮುಳ್ಳಾಯಿತೆ ಲೋಕದ ನಿಂದನೆಗೇನು ಹೇಳಲಿ
ಕನಸುಗಳೇ ಕೊಚ್ಚಿ ಬೆಂದು ಹೋಗುವಾಗ ಈ ಹಾದಿಗೆಲ್ಲಿ ಸಮಾಧಾನ
ಯಾರದೋ ಪಾಪದ ಫಲ ಜೋಳಿಗೆ ತುಂಬಿ ನಗುವಾಗ ಶಾಂತಿ ಮರೀಚಿಕೆ
ದಿನಗಳೇ ತಲ್ಲಣಿಸಿ ಭಾರದಲಿ ಕುಸಿವಾಗ ಈ ಮೌನಕ್ಕೆಲ್ಲಿ ಸಮಾಧಾನ
ಕಹಿ ಗಂಟುಗಳೇ ಬಿಚ್ಚಿ ವಿಷ ಕಕ್ಕುವಾಗ ನುಂಗಲಾರದ ತುತ್ತು ಬಾಳು
ನಿಂದನೆಗಳೇ ಆತು ಅಪ್ಪಿ ಬಂಧಿಸಿರುವಾಗ ಈ ಭಾವಕ್ಕೆಲ್ಲಿ ಸಮಾಧಾನ
ಹೆಜ್ಜೆಗಳೇ ಮಡಗಿವೆ ಎಂದು ಪರಿತಪಿಸದಿರು ಭಾವಗಳ ಜತನಕೆ ಮೃಡನಿರುವನು
ಅರಿ ಕನಸಿಗೂ ನೆರಳಾಗಿ ಶೂನ್ಯದೆಡೆ ತೆರಳಿಬಿಡು ಸತ್ಯವಾಣಿಗಿಲ್ಲಿ ಸಮಾಧಾನ
- ವಾಣಿ ಭಂಡಾರಿ
ಇಂದು ಸಮಾಧಾನ, ನೆಮ್ಮದಿಗಳನ್ನು ಬಿಟ್ಟು ಬೇರೆಲ್ಲವೂ ನಮ್ಮ ಬಳಿ ದಂಡಿ ದಂಡಿಯಾಗಿ ಬಿದ್ದುಕೊಂಡಿವೆ. ದುಡ್ಡಿನ ಹಿಂದೆ ನಾಗಾಲೋಟದಿ ಬೆಂಬಿದ್ದಿರುವ ಮನಸುಗಳು ಶಾಂತಿ-ಸಮಾಧಾನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ನೋವುಗಳ ಮೂಟೆ ಬೆನ್ನಿಗಂಟಿಕೊಂಡಿರುವಾಗ, ಹೆಜ್ಜೆ ಹೆಜ್ಜೆಗೂ ಸೋಲುಗಳೇ ಕಾಲಿಗಡರಿಕೊಳ್ಳುತ್ತಿರುವಾಗ ಮನುಷ್ಯ ಹೇಗೆ ತಾನೆ ನೆಮ್ಮದಿಯಿಂದಿರಬಲ್ಲ ಅಲ್ಲವೆ? ಲೋಕ ಹಿಂದೆಂದಿಗಿಂತ ಬಹಳಷ್ಟು ಬದಲಾಗಿದೆ ಇಲ್ಲವೆ ನಾವೇ ಬದಲಾವಣೆಯ ಗಾಳಿಗೆ ಒಗ್ಗಿಕೊಂಡಿದ್ದೇವೆ. ನಮಗರಿವಿಲ್ಲದೆ ಕ್ಷಣಿಕ ಸುಖದ ಬೆನ್ನು ಹತ್ತಿ ನೋವುಗಳನ್ನೇ ಬಳುವಳಿಯಾಗಿ ಪಡೆಯುತ್ತಿರುವ ಬದುಕಿನ ಬಗ್ಗೆ, ಏನೆಲ್ಲ ಇದ್ದರೂ ಇಲ್ಲದ ಸಮಾಧಾನದ ಕುರಿತು ಕವಯಿತ್ರಿ ವಾಣಿ ಭಂಡಾರಿಯವರ ಗಜಲ್ ಮಾರ್ಮಿಕವಾಗಿ ಬಣ್ಣಿಸುತ್ತದೆ.
ಬದುಕು ಬಲು ವಿಚಿತ್ರ ಸಂತಸಕ್ಕಾಗಿ ಕಾದು ಕುಳಿತಾಗ ಇದಿರಾಗುವ ಸಂಕಟ, ನೋವುಗಳ ಸರಮಾಲೆಗಳು ಜೀವನದ ಸಡಗರವನ್ನು ತಿಂದು ಹಾಕುತ್ತವೆ. ಹತ್ತಿರದವರೇ ಅಪಮಾನಿಸಿ ಮೋಜು ನೋಡುವಾಗ ಅವಮಾನಿಸಿಕೊಂಡ ಮನಸು ಸಮಾಧಾನಿಯಾಗಿರಲು ಹೇಗೆ ಸಾಧ್ಯ? ಅದಕ್ಕೆ ಕವಯಿತ್ರಿ ಇಷ್ಟೆಲ್ಲ ಅಪಸವ್ಯಗಳು ಹೆಗಲಿಗೆ ಜೋತು ಬಿದ್ದಿರುವಾಗ ಇನ್ನೆಲ್ಲಿಯ ಸಮಾಧಾನ ಎಂಬ ಪ್ರಶ್ನೆ ಮಾಡುತ್ತಾರೆ. ನುಡಿದಂತೆ ನಡೆಯುವುದೇ ಈ ಲೋಕದ ಕಣ್ಣಿಗೆ ಅಪರಾಧವಾಗಿ ನಿಂದನೆಗಳು ತೂರಿ ಬರುತ್ತಿರುವಾಗ, ಭವಿಷ್ಯದ ಬಗ್ಗೆ ಕಾಣುವ ಹೊಂಗನಸುಗಳು ಚೂರು ಚೂರಾಗಿರುವಾಗ ನೆಮ್ಮದಿ ಮರೀಚಿಕೆ. ಯಾರೋ ಬೀಸಿದ ಅಂಗೈಗೆ ಕೆನ್ನೆ ನಾನಾಗಿರುವಾಗ, ಅವರ ಪಾಪದ ಕೊಡ ಹೊತ್ತು ನಡೆವ ಶಿಕ್ಷೆ ನನ್ನದಾಗಿರುವಾಗ ದಿನಗಳು ಭಾರವಾಗಿ, ಕುಸಿದು ಕೂರುವ ಬದುಕಿಗೆ ಸಮಾಧಾನದ ಆಸರೆ ಗಾವುದ ಗಾವುದ ದೂರ. ಕಹಿ ನೆನಪುಗಳು ವಿಷ ಕಕ್ಕುತ್ತಿರಲು, ಜಗದ ನಿಂದನೆಗಳೇ ಅಪ್ಪಿಕೊಂಡಿರಲು ಇನ್ನಿಲ್ಲ ಸಮಾಧಾನ. ಇಷ್ಟೆಲ್ಲ ವಿಷಾದಗಳನ್ನು ಹೇಳಿಕೊಂಡ ಮೇಲೆ ಗಜಲ್ ಕೊನೆಗೆ ಆಶಾವಾದವನ್ನು ತುಂಬುತ್ತದೆ. ನಿನಗ್ಯಾರೂ ಇಲ್ಲ ಎಂದು ವೃಥಾ ಕೊರಗಿ ಮರುಗದಿರು, ಲೋಕವನು ಸಲಹುವ ವಿಶ್ವಾತ್ಮ ನಿನ್ನ ಜೊತೆಗಿರುವ ಭಯ ಬೇಡ. ಎಲ್ಲವನ್ನೂ ಎದೆಯೊಡ್ಡಿ ಎದುರಿಸು. ನಿನ್ನ ದ್ವೇಷಿಸುವವರಿಗೂ ಒಳಿತನ್ನೇ ಬಯಸು. ಶೂನ್ಯದಲ್ಲಿ ಲೀನವಾಗು, ಎಂದಿಗೂ ಸತ್ಯಕ್ಕೇ ಜಯ ಮರೆಯದಿರು ಎಂಬ ಸಾಂತ್ವನವನ್ನು ನೀಡುತ್ತದೆ.
ಸದ್ಯದ ಸ್ಥಿತಿಯಲ್ಲಿ ಮನುಷ್ಯ ಕಳೆಯುವ ಆತಂಕಕಾರಿ ಸನ್ನಿವೇಶವನ್ನು ಎಳೆಎಳೆಯಾಗಿ ಬಿಚ್ಚಿಡುವ ಗಜಲ್, ಅದಕ್ಕೆ ಪರಿಹಾರವನ್ನೂ ಸೂಚಿಸುವುದರ ಮೂಲಕ ಬದುಕಿನ ದಾರಿಯನ್ನು ಹೇಳಿ ಕೊಡುತ್ತದೆ. ಇಂತಹ ಒಳ್ಳೆಯ ಗಜಲ್‌ಗಾಗಿ ಕವಯಿತ್ರಿ ವಾಣಿ ಭಂಡಾರಿಯವರನ್ನು ಅಭಿನಂದಿಸುತ್ತೇನೆ.
- * * * -