ವಚನಕಾರರು ವ್ಯಕ್ತಿತ್ವ ವಿಕಸನದ ಪಿತಾಮಹರು : ಡಾ.ಜೆ.ಎಸ್‌.ಪಾಟೀಲ

ವಚನಕಾರರು ವ್ಯಕ್ತಿತ್ವ ವಿಕಸನದ ಪಿತಾಮಹರು : ಡಾ.ಜೆ.ಎಸ್‌.ಪಾಟೀಲ Vachanakaras are the fathers of personality development: Dr. J.S. Patil

ಲೋಕದರ್ಶನ ವರದಿ 

ಹಾರೂಗೇರಿ 22 : ವಚನಗಳ ಮೂಲಕ ಕಾಯಕದ ಮಹತ್ವ, ಆತ್ಮಶುದ್ಧಿಯ ಅಗತ್ಯ, ನಿರಹಂಕಾರದ ನಿಜತ್ವಗಳನ್ನು ಎಲ್ಲರಿಗೂ ತಲುಪಿಸುವ ಮೂಲಕ ವಚನಕಾರರು ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಡಿದ್ದಾರೆ ಎಂದು ವಿಜಯಪುರದ ವಿಶ್ರಾಂತ ಪ್ರಾಚಾರ್ಯ ಡಾ.ಜೆ.ಎಸ್‌.ಪಾಟೀಲ ಹೇಳಿದರು. 

  ಇಲ್ಲಿನ ಎಸ್‌ಪಿಎಮ್ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಸಹಯೋಗದಲ್ಲಿ ಬುಧವಾರ ಪ್ರಶಿಕ್ಷಣಾರ್ಥಿಗಳಿಗೆ ಒಂದು ದಿನದ ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

  ಕೊಲ್ಲುವುದು ರಾಕ್ಷಸ ಧರ್ಮವಾದರೆ, ವ್ಯಕ್ತಿಗಳಲ್ಲಿರುವ ರಾಕ್ಷಸ ಗುಣಗಳನ್ನು ಕೊಲ್ಲುವುದು ವಚನ ಧರ್ಮ. ಧರ್ಮ, ಜಾತಿಯ ಹೆಸರಿನಲ್ಲಿ ಉದ್ಯಮ ಮಾಡುತ್ತ, ನಂಬಿಕೆಗಳಿಗೆ ಮೌಢ್ಯತೆ ಬೆರೆಸಿ, ಮೂಢ ನಂಬಿಕೆಗಳನ್ನು ಜನರಲ್ಲಿ ಬಿತ್ತುತ್ತಿರುವವರ ವಿರುದ್ಧ ಬಸವಾದಿ ಶರಣರ ವಚನಗಳು ನಿಂತು, ಅತ್ಯಂತ ಸರಳವಾಗಿ ನಮ್ಮೊಳಗೆ ಸಾತ್ವಿಕ ಚಿಂತನೆಗಳನ್ನು ಜಾಗೃತಗೊಳಿಸಿ, ವ್ಯಕ್ತಿತ್ವವನ್ನು ವಿಕಸನ ಮಾಡುತ್ತಿವೆ ಎಂದು ಹೇಳಿದರು. 

   ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಡಾ.ಚಂದ್ರಶೇಖರ ಗುಡಸಿ ಮಾತನಾಡುತ್ತ ವ್ಯಕ್ತಿತ್ವದಲ್ಲಿ ನೈತಿಕತೆಯನ್ನಿಟ್ಟುಕೊಂಡು ಬದುಕುವುದೇ ಉದಾತ್ತ ಜೀವನವೆಂಬುದನ್ನು ಶರಣರ ವಚನಗಳು ಕಲಿಸಿವೆ. ವಚನ ಸಾಹಿತ್ಯ ಸಮಾಜ ಪರಿವರ್ತನೆಯ ದಿವ್ಯ ಓಷಧವಾಗಿದೆ. ವಚನಗಳು ಆತ್ಮಸಾಕ್ಷಿ, ಮನಸಾಕ್ಷಿಯಾಗಿ ನುಡಿದ ನುಡಿಗಳಾಗಿವೆ ಎಂದರು. 

  ಹಿರಿಯರಾದ ಬಸನಗೌಡ ಆಸಂಗಿ, ಪ್ರಾಚಾರ್ಯ ಡಾ.ಎಲ್‌.ಎಸ್‌.ಧರ್ಮಟ್ಟಿ, ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಬಸವರಾಜ ಮಂಟೂರ, ಹಣಮಂತ ಯಲಶೆಟ್ಟಿ, ಎಂ.ಬಿ.ಪಡೇದಾರ, ಶ್ರೀಶೈಲ ಪೂಜೇರಿ, ಮಾರುತಿ ಪಡೇದಾರ, ಪ್ರೊ.ನಾಗರಾಜ ಗುಡಸಿ, ಪ್ರೊ.ಬಿ.ಬಿ.ರಾಮತೀರ್ಥ, ಪ್ರೊ.ಎನ್‌.ಬಿ, ನಾಗನೂರ, ಪ್ರೊ.ಎಸ್‌.ಎಸ್‌.ಹಾರೂಗೇರಿ, ಪ್ರೊ.ಜಯಶ್ರೀ ಭಂಗಿ, ಸುಭಾಸ ಸಂಗನಗೌಡರ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.  ಚೈತ್ರಾ ಪತ್ತಾರ ಪ್ರಾರ್ಥಿಸಿದರು. ರವಿ ಕಡಪಟ್ಟಿ ಸ್ವಾಗತಿಸಿದರು. ಪ್ರೀತಿ ಕುಳ್ಳೋಳಿ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಸವದತ್ತಿ ವಂದಿಸಿದರು.