ಶ್ವಾಸಕೋಶ ಸಂಬಂಧಿತ ರೋಗಗಳ ನಿಯಂತ್ರಣಕ್ಕೆ ಲಸಿಕೆಗಳು ಉಪಲಬ್ಧ: ಡಾ.ಕೀರ್ತಿವರ್ಧನ್ ಕುಲಕರ್ಣಿ

ಶ್ವಾಸಕೋಶ ಸಂಬಂಧಿತ ರೋಗಗಳ ನಿಯಂತ್ರಣಕ್ಕೆ ಲಸಿಕೆಗಳು ಉಪಲಬ್ಧ: ಡಾ.ಕೀರ್ತಿವರ್ಧನ್ ಕುಲಕರ್ಣಿ Vaccines are available to control lung-related diseases: Dr. Kirtivardhan Kulkarni

ಗದಗ 11: ಮಾನವನ ಮೂರು ಬಹುಮುಖ್ಯ ಅಂಗಗಳೆಂದರೆ: ಶ್ವಾಸಕೋಶ, ಹೃದಯ, ಮೆದುಳು. ಅವುಗಳ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅವಶ್ಯಕ ಹಿರಿಯ ನಾಗರಿಕರಲ್ಲಿ ಬರುವ ಮುಖ್ಯ ಶ್ವಾಸಕೋಶದ ರೋಗಗಳೆಂದರೆ ಅಸ್ತಮಾ, ಅಲರ್ಜಿ, ನ್ಯುಮೋನಿಯಾ, ಕ್ಷಯ ರೋಗ, ಧೂಮಪಾನದಿಂದಾಗುವ ಬ್ರಾಂಕೈಟಿಸ್ ಮತ್ತು ದಮ್ಮಿನ ಕಾಯಿಲೆ. ಇವನ್ನು ನಿಯಂತ್ರಿಸಲು ಇತ್ತೀಚೆಗೆ ಪರಿಣಾಮಕಾರಿ ಓಷಧಿಗಳು ಅಷ್ಟೇ ಅಲ್ಲದೆ ಉತ್ತಮ ವ್ಯಾಕ್ಸಿನ್ ಚುಚ್ಚುಮದ್ದುಗಳು ಸಹ ಬಂದಿವೆ. ತಜ್ಞ ವೈದ್ಯರಿಂದ ಪರೀಕ್ಷಿಸಿ ಕೊಂಡು ಚಿಕಿತ್ಸೆ ಪಡೆದರೆ ಇಳಿವಯಸಿನಲ್ಲೂ ಆರೋಗ್ಯಕರ ಬದುಕು ಬದುಕಬಹುದೆಂದು ಖ್ಯಾತ ಶ್ವಾಸ ಶಾಸಕೋಶ ರೋಗತಜ್ಞರಾದ ಡಾ.ಕೀರ್ತಿವರ್ಧನ. ಡಿ.ಕುಲಕರ್ಣಿ ವಿಜಯಪುರ ಇವರು ನುಡಿದರು.  

ಅವರು ನಗರದ ವೀರಶೈವ ಲಿಂಗಾಯತ ಭವನದಲ್ಲಿ ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ(ಉತ್ತರ) ವತಿಯಿಂದ ನಡೆದ ಮಾಸಿಕ ಸಭೆಯಲ್ಲಿ ಹಿರಿಯ ನಾಗರಿಕರಿಗೆ ಮಾರ್ಗದರ್ಶನ ಮಾಡಿದರು. 

ಶ್ವಾಸಕೋಶದ ರೋಗಗಳನ್ನು ತಡೆಗಟ್ಟಲು ಮನೆಯಲ್ಲಿ ಸ್ವಚ್ಛತೆ ಕಾಪಾಡುವುದು, ಹಾನಿಕಾರಕವಾದ ಧೂಮ್ರಪಾನ ಬಿಡುವುದು ಆರೋಗ್ಯಕ್ಕೆ ಹಾನಿಕಾರವಾದ ಕೆಲವು ಪೌಡರ್, ಸೇಂಟ್, ಡಿಯೋಡರೆಂಟ್ ಸೊಳ್ಳೆ ನಿವಾರಕಗಳ ಬಳಕೆ ಕಡಿಮೆ ಮಾಡಬೇಕು. ಅತಿ ತಂಪಾದ ಆಹಾರಪಾನೀಯಗಳನ್ನು ವರ್ಜಿಸಬೇಕು. ಅವಶ್ಯಕತೆ ಇದ್ದಾಗ ಕೆಮ್ಮು, ನೆಗಡಿ ಅಂತಹವು ಬಹುದಿನಗಳವರೆಗೆ ಉಳಿದರೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ಹೆಚ್ಚಿನ ಆರೋಗ್ಯ ಸಮಸ್ಯೆ ಆಗದಂತೆ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿ ವರ್ಷ ಚಳಿಗಾಲದ ಮೊದಲಿಗೆ ಒಂದು ತಿಂಗಳು ಮುಂಚಿತವಾಗಿ ಇನ್‌ಫ್ಲುಎಂಜಾ ಲಸಿಕೆಯನ್ನು ಹಾಗೂ 60ನೇ ವಯಸ್ಸಿನಲ್ಲಿ ಒಂದು ಡೋಸ್ ಪಿ.ಸಿ.ವಿ-13 ಒಂದು ವರ್ಷದ ನಂತರ ಪಿ.ಸಿ.ವಿ-23 ಮತ್ತು ಪ್ರತಿ ಐದು ವರ್ಷಕ್ಕೊಮ್ಮೆ ಪಿ.ಸಿ.ವಿ-23 ಪುನರಾವೃತ್ತಿಯಾಗಿ ಲಸಿಕೆ(ವ್ಯಾಕ್ಸಿನ್) ತೆಗೆದುಕೊಂಡರೆ ಶ್ವಾಸಕೋಶದ ಜೀವಘಾತಕ ರೋಗವಾದ ನ್ಯುಮೋನಿಯಾದಿಂದ ಮುಕ್ತಿ ಪಡೆಯಬಹುದು. 

ನಿಯಮಿತವಾಗಿ ವಾಯುವಿಹಾರ, ಸೂಕ್ಷ್ಮ ವ್ಯಾಯಾಮ, ಯೋಗ-ಪ್ರಾಣಾಯಾಮಗಳೊಂದಿಗೆ ಸ್ವಚ್ಛ ವಾತಾವರಣದಲ್ಲಿ ಇರುತ್ತಾ, ಸಮಯೋಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಪಡೆದು ದೀರ್ಘಾಯುಷಿಗಳಾಗಿ ಬಾಳಲು ಕರೆಯುತ್ತರು. ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಪ್ರೋಬಸ್ ಕ್ಲಬ್ ಅಧ್ಯಕ್ಷರಾದ ಮಹಾದೇವ.ಎಸ್‌. ಹಾಲಳ್ಳಿ, ವಿಜಯಪುರ ಇವರು ತಜ್ಞ ವೈದ್ಯರ ಸಲಹೆಯಂತೆ ದುಶ್ಚಟಗಳಿಂದ ದೂರವಿದ್ದು ಸಮಯೋಚಿತ ತಪಾಸಣೆ ಹಾಗೂ ಚಿಕಿತ್ಸೆ ಪಡೆದು ಈ ವಯಸ್ಸಿನಲ್ಲೂ ಸಂತಸದಿಂದ ಆರೋಗ್ಯಕರವಾಗಿ ಬದುಕೋಣ ಎಂದರು. ಕಾರ್ಯದರ್ಶಿಗಳಾದ ಡಾ. ಶಶಿಧರ ಶಿರಹಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಬಿ.ಎಸ್‌.ಸಜ್ಜನ್ ಹಾಗೂ ಶಂಕರ ತದ್ದೇವಾಡಿ ಪ್ರಾರ್ಥನೆ ಸಲ್ಲಿಸಿದರು. ಸುಭಾಷ ಬೆಟಗೇರಿ ಸ್ವಾಗತಿಸಿದರು.    ಡಾ. ಎಸ್‌.ಸಿ.ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಜಗದೀಶ ಮೋಟಗಿ ವಂದಿಸಿದರು.  

ಈ ಕಾರ್ಯಕ್ರಮದಲ್ಲಿ  ವಿಸಿ ನಾಗಠಾಣ ಸಹದೇವ ನಾಡಗೌಡ, ಮ.ಗು.ಯಾದವಾಡ, ಷಣ್ಮುಗಪ್ಪ ರೋಡಗಿ, ಈರಣ್ಣ ಚಿಮ್ಮಲಗಿ, ಸಂಗಮೇಶ್ವರ, ಅಕ್ಕಮಹಾದೇವಿ ಬುರಲಿ, ಬಿ. ಎಂ. ಪಾಟೀಲ ಮುಂತಾದ ಸುಮಾರು 70 ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.