ಬೆಂಗಳೂರು, ಸೆ 15 ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಜನ್ಮದಿನಕ್ಕೆ ವಿಶೇಷ ರಜೆ ನೀಡಬೇಕು ಎಂದು ಆದೇಶ ಹೊರಡಿಸಿ, ಪೊಲೀಸರ ಮುಖದಲ್ಲಿ ಸಂತಸ ಮೂಡಿಸಿದ್ದ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ರವಿವಾರ ಅಧಿಕೃತವಾಗಿ ಈ ನಿಯಮ ಜಾರಿಗೆ ಚಾಲನೆ ನೀಡಿದರು.
ಪೊಲೀಸರು ಅತಿ ಒತ್ತಡದಲ್ಲಿ ಕಾರ್ಯನಿರ್ವಹಿಸುವುದರಿಂದ ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕನಿಷ್ಠ ತಮ್ಮ ಹುಟ್ಟು ಹಬ್ಬದ ದಿನವಾದರೂ ಕುಟುಂಬದೊಂದಿಗೆ ಖುಷಿಯಾಗಿ ಇರಲೆಂದು ಶುಭಾಶಯ ಪತ್ರ ಕಳಿಸುವ ಮೂಲಕ ಅವರಿಗೆ ರಜೆ ನೀಡಬೇಕೆಂದು ಶನಿವಾರವಷ್ಟೇ ಆಯುಕ್ತರು ವಿಶೇಷ ಆದೇಶ ಹೊರಡಿಸಿದ್ದರು.
ಹುಟ್ಟು ಹಬ್ಬದ ಶುಭಾಶಯ ಪತ್ರಗಳನ್ನು ಆಯಾ ಠಾಣೆಯ ಹಿರಿಯ/ಮೇಲುಸ್ತುವಾರಿ ಅಧಿಕಾರಿಗಳಿಗೆ ಖುದ್ದಾಗಿ ಠಾಣಾ/ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಿ ಶುಭ ಕೋರಬೇಕು. ಎಎಸ್ಐ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅನುಮತಿಯ ರಜೆಯನ್ನು ಅವರ ಹುಟ್ಟು ಹಬ್ಬದ ದಿನದಂದು ನೀಡುವಂತೆ ಆಯುಕ್ತರು ಸೂಚಿಸಿದ್ದರು.
ಆಯುಕ್ತರು ತಮ್ಮ ಟ್ವೀಟ್ ನಲ್ಲಿ ಖಾಕಿಯಲ್ಲಿನ ಅದ್ಭುತ ಕ್ಷಣಗಳು" ಎಂದು ತಮ್ಮ ಅಭಿಪ್ರಾಯವನ್ನು ಹೀಗೆ ಹಂಚಿಕೊಂಡಿದ್ದಾರೆ. "ನನ್ನ ಪೊಲೀಸ್ ಕುಟುಂಬದಲ್ಲಿ ಈ ದಿನದಂದು ಹುಟ್ಟಿದ ಸದಸ್ಯರುಗಳ ಹುಟ್ಟು ಹಬ್ಬವನ್ನು ಆಚರಿಸಿದ ಕ್ಷಣಗಳು. ಈ ಉಪಕ್ರಮದ ಪ್ರಾರಂಭವು, ಕನ್ನಡಿಗ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮ ದಿನದಂದು ಘಟಿಸಿರುವುದು ಮತ್ತೊಂದು ವಿಶೇಷ ಎಂದು ಹುಟ್ಟು ಹಬ್ಬ ಆಚರಿಸಿಕೊಂಡ ಸಿಬ್ಬಂದಿಯ ಫೋಟೋ ಶೇರ್ ಮಾಡಿದ್ದಾರೆ.