ಕ್ಯಾಸಿನೊಗಳಿಗೆ ಪರವಾನಗಿ ನೀಡಲು ಉತ್ತರ ಪ್ರದೇಶ ಸರ್ಕಾರ ನಿರಾಕರಣೆ

ಲಕ್ನೋ, ಫೆ 26 :   ಕರ್ನಾಟಕದಲ್ಲಿ ಕ್ಯಾಸಿನೋಗಳಿಗೆ ಪರವಾನಿಗೆ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವಾಗಲೇ ಕ್ಯಾಸಿನೊ ಇಲ್ಲವೇ ಲಾಟರಿ ನಡೆಸಲು ಪರವಾನಗಿ ನೀಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಬುಧವಾರ ರಾಜ್ಯ ವಿಧಾನಸಭೆಗೆ ತಿಳಿಸಿದೆ.  

ಬಿಜೆಪಿ ಸದಸ್ಯ ಹರ್ಷವರ್ಧನ್ ಬಾಜ್ ಪೈ ಅವರ ಪ್ರಶ್ನೆಗೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ, ರಾಜ್ಯದಲ್ಲಿ ಜೂಜಾಟವನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ. ಇದು ಜನರಿಗೆ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.  

‘ಕ್ಯಾಸಿನೊ ಸಂಪೂರ್ಣವಾಗಿ ಜೂಜಿನ ಆಟವಾಗಿದೆ. ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲ.’ ಎಂದು ಅವರು ಹೇಳಿದರು.  

ಆದರೆ, ಕ್ಯಾಸಿನೊ ತೆರೆಯಲು ಪರವಾನಗಿ ನೀಡುವ ಮೂಲಕ ಸರ್ಕಾರ ಹೆಚ್ಚು  ಆದಾಯ ಗಳಿಸಬಹುದು. ಕ್ಯಾಸಿನೊ ಚಟುವಟಿಕೆಗಳನ್ನು ಆನಂದಿಸಲು ರಾಜ್ಯದ ಜನರು ನೇಪಾಳ, ಗೋವಾ ಮತ್ತು ಇತರ ಸ್ಥಳಗಳಿಗೆ ಹೋಗುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಬಾಜ್ ಪೈ ಪ್ರತಿಪಾದಿಸಿದರು.  

ಬುಂದೇಲ್ಖಂಡ್ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕೆಂಬ ಬೇಡಿಕೆ ಕುರಿತು ಮತ್ತೊಬ್ಬ ಬಿಜೆಪಿ ಸದಸ್ಯ ಜವಾಹರ್ ಲಾಲ್ ರಜಪೂತ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಕ್ಕರೆ ಖಾತೆ ಸಚಿವ ಸುರೇಶ್ ರಾಣಾ, ಸದ್ಯ ಇಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.