ಲಖನೌ, ಅ 24: ಉತ್ತರಪ್ರದೇಶದಲ್ಲಿ 11 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ನಡೆದ ಮತದಾನದಲ್ಲಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ಸಮಬಲದ ಸ್ಪರ್ಧೆಯೊಡ್ಡುತ್ತಿವೆ. ಸದ್ಯದ ಮಾಹಿತಿ ಪ್ರಕಾರ, ಆಡಳಿತಾರೂಢ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ವಿಪಕ್ಷವಾಗಿರುವ ಸಮಾಜವಾದಿ ಪಕ್ಷ 3 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 2 ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಗೆಲುವಿನತ್ತ ನಾಗಲೋಟ ಬೆಳೆಸಿದ್ದರೆ, ಕಾಂಗ್ರೆಸ್ ಹಾಗೂ ಸ್ವತಂತ್ರ ಅಭ್ಯರ್ಥಿ ತಲಾ ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ವರದಿಗಳ ಪ್ರಕಾರ, ಮೊದಲ ಹಂತದ ಮತಎಣಿಕೆಯಲ್ಲಿ ಬಿಜೆಪಿ, ಲಖನೌ ಕಂಟೋನ್ಮೆಂಟ್, ಮಾಣಿಕ್ ಪುರ, ಬಾಲ್ಹಾ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ, ಎಸ್ ಪಿ ನಾಯಕ ಅಜಂ ಖಾನ್ ಪತ್ನಿ ತನ್ಸೀಮ್ ಫಾತಿಮಾ ರಾಮಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೆದುರು 5000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.