ಆರೋಗ್ಯಕ್ಕಾಗಿ ಶೌಚಾಲಯ ಬಳಸಿ : ಡಾ.ಪುನಿತ್

ವಿಶ್ವ ಶೌಚಾಲಯ ದಿನಾಚರಣೆ ಽ ನಮ್ಮ ಶೌಚಾಲಯ, ನಮ್ಮ ಗೌರವ 

ಬಾಗಲಕೋಟೆ 19: ಉಲ್ಲಾಸಮಯ ಜೀವನ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಶೌಚಾಲಯ ಬಳಕೆ ಮಾಡಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಪುನಿತ್ ಬಿ.ಆರ್ ಹೇಳಿದರು. 

ತಾಲೂಕಿನ ಬೇವಿನಮಟ್ಟಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ ಗ್ರಾಮ ಪಂಚಾಯತ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಶೌಚಾಲಯ ದಿನಾಚರಣೆ ಹಾಗೂ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶೌಚಾಲಯ ನಿರ್ಮಿಸಿಕೊಳ್ಳಲು ಸರಕಾರ ಸಹಾಯಧನ ನೀಡುತ್ತಿದ್ದು, ಈ ಸಹಾಯಧನ ಪಡೆದುಕೊಂಡು ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು. 

ಈಗಾಗಲೇ ನಿರ್ಮಿಸಿದ ಶೌಚಾಲಯಗಳು ಶೀಥಲಗೊಂಡಿದ್ದರೆ ದುರಸ್ಥಿ ಮಾಡಿಕೊಂಡು ಬಳಸಲು ಮುಂದಾಗಬೇಕು. ವ್ಯಯಕ್ತಿಕ ಮತ್ತು ಸಮುದಾಯ ಶೌಚಾಲಯಗಳನ್ನು ಉಪಯೋಗಿಸಿ ಕೊಳ್ಳುವುದರ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವ್ಯಯಕ್ತಿಕ ಸಮುದಾಯ ಶೌಚಾಲಯಗಳನ್ನು ಉತ್ತಮವಾಗಿಟ್ಟುಕೊಂಡವರಿಗೆ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪುರಸ್ಕಾರ ನೀಡಿ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು. 

ವಿಷಮ ಶೀಥ ಜ್ವರ (ಟೈಪಾಯಿಡ್)ಕ್ಕೆ ಮೂಲ ಕಾರಣ ಬಯಲು ಶೌಚಾಲಯ ಕಾರಣವಾಗಿದ್ದು, ಇದಕ್ಕಾಗಿ ಹತ್ತರಲ್ಲಿ ಐದರಷ್ಟು ಮಕ್ಕಳು ಬಲಿಯಾಗುತ್ತಿದ್ದಾರೆ. ಆದ್ದರಿಂದ ಶೌಚಾಲಯದ ಬಗ್ಗೆ ಜಾಗೃತಿ ವಹಿಸಬೇಕಿದೆ. ಮನೆಯಲ್ಲಿ ಶೌಚಾಲಯ ಇಲ್ಲದಿದ್ದಲ್ಲಿ ಪಾಲಕರಲ್ಲಿ ಒತ್ತಾಯ ಮಾಡಿ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಗ್ರಾಮೀಣ ಮಟ್ಟದಲ್ಲಿ ಶೌಚಾಲಯದ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾದ ಉದ್ದೇಶವಾಗಿದ್ದು, ನಮ್ಮ ಶೌಚಾಲಯ, ನಮ್ಮ ಗೌರವ ಎಂಬ ದ್ಯೇಯ ವಾಕ್ಯದೊಂದಿಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಈ ಶೌಚಾಲಯ ಸಮರ​‍್ಕವಾಗಿ ನಿರ್ವಹಿಸಿ ಇಬ್ಬರನ್ನು ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತಿದೆ. ಅದರಂತೆ ಸಮುದಾಯ ಶೌಚಾಲಯಗಳನ್ನು ಉತ್ತಮವಾಗಿ ಬಳಸಿದಲ್ಲಿ ಅಂತವರನ್ನು ಗುರುತಿಸಿ ಸೂಕ್ತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು. 

ಕಾರ್ಯಕ್ರಮದಲ್ಲಿ ಬೇವಿನಮಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷೆ ರುಕ್ಮವ್ವ ಗೌಡರ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್‌.ಬಡದಾನಿ, ಶಿಕ್ಷಣಾಧಿಕಾರಿ ಮಿರ್ಜಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ರಮೇಶ ಸೂಳಿಕೇರಿ, ಪಂಚಾಯತ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಪರಮೇಶ್ವರ ಚಲವಾದಿ, ಅಂಗನವಾಡಿ ಮೇಲ್ವಿಚಾರಕಿ ರೂಪಾ ಇದ್ದಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಯ ಎಂ.ಬಿ.ಬಾಲರೆಡ್ಡಿ ಸ್ವಾಗತಿಸಿದರು.