ಕನ್ನಡವನ್ನು ಹೃದಯದ ಮೂಲಕ ಬಳಸಿ: ಡಾ.ಪುರುಷೋತ್ತಮ ಬಿಳಿಮಲೆ

ಕನ್ನಡವನ್ನು ಹೃದಯದ ಮೂಲಕ ಬಳಸಿ: ಡಾ.ಪುರುಷೋತ್ತಮ ಬಿಳಿಮಲೆ Use Kannada from the heart: Dr. Purushottam Bilimale

ಕಾರವಾರ  24  :-  ರಾಜ್ಯದ ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕನ್ನಡವನ್ನು ತಮ್ಮ ಹೃದಯಕ್ಕೆ ತೆಗೆದುಕೊಂಡು ಬಳಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಶೇ.100 ರಷ್ಟು ಕನ್ನಡ ಬಳಕೆಯಾಗುವಂತೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. 

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

 ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸಿದ್ದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಜೊತೆಗೆ ಆಡಳಿತ ಉತ್ತಮವಾಗಿ ನಡೆಯಲು ಸಾಧ್ಯವಾಗಲಿದ್ದು, ಇದರಿಂದ ಜನತೆ ಮತ್ತು ಪ್ರಭುತ್ವದ ನಡುವಿನ ಅಂತರ ಇದರಿಂದ ಕಡಿಮೆಯಾಗಲಿದೆ ಎಂದರು. 

ದೇಶದಲ್ಲಿ 1971 ರಿಂದ 2011 ರ ವರೆಗೆ ನಡೆದ ಗಣತಿಯ ಪ್ರಕಾರ ಕನ್ನಡ ಭಾಷೆಯು ಕಡಿಮೆ ವೇಗದಲ್ಲಿ  ಬೆಳೆಯುತ್ತಿರುವ ಭಾಷೆಯಾಗಿದೆ. ಜಾಗತೀಕರಣದ ಪರಿಣಾಮ ವಿಶ್ವದಲ್ಲಿ ಶೇ.8 ರಷ್ಟಿರುವ ಜನರ ಭಾಷೆಯಿಂದ 92ಅ ಜನರು ಇರುವ ಭಾಷೆಗಳ ಮೇಲೆ ದಬ್ಬಾಳಕೆ ನಡೆಯುತ್ತಿದೆ. ಭಾಷೆ ಕೊನೆಯಾದರೆ ಸಂಸ್ಕೃತಿ ಕೊನೆಯಾಗುತ್ತದೆ ಭಾರತದ ಶಕ್ತಿಯೇ ಬಹುಭಾಷೆಗಳು ಎಂದ ಅವರು, ಕನ್ನಡ ಆಭಿವೃದ್ದಿ ಪ್ರಾಧಿಕಾರವು ಕನ್ನಡ ಭಾಷೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸತ್ತಿದೆ ಎಂದರು. 

ರಾಜ್ಯದಲ್ಲಿ ಕನ್ನಡದ ಜೊತೆಗೆ ರಾಜ್ಯದಲ್ಲಿರುವ ಇತರೇ ಸಣ್ಣ ಭಾಷೆಗಳ ಬೆಳವಣಿಗಗೂ ಸಹ ಪ್ರಾಧಿಕಾರವು ಮುಂದಾಗಿದ್ದು ಇವುಗಳನ್ನು ಉಳಿಸಲು ಸಮಿತಿಯನ್ನು ರಚಿಸಲಾಗುತ್ತಿದೆ ಎಂದ ಅವರು ಕನ್ನಡ ಕಲಿಯಲು ಬಯಸುವ ಇತರೇ ಭಾಷಿಕರಿಗಾಗಿ ಕಲಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಇದಕ್ಕಾಗಿ ಅತ್ಯಂತ ಸರಳವಾದ ಪಠ್ಯವನ್ನು ಸಿದ್ದಪಡಿಸಿದ್ದು 36 ಗಂಟೆಗಳಲ್ಲಿ ಕನ್ನಡ ಕಲಿಸಲಾಗುವುದು ಎಂದರು.. 

 ಕನ್ನಡ ಭಾಷೆೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡದ ಉಳಿವಿಗಾಗಿ ಅಧಿಕಾರಿಗಳು ಹೆಚ್ಚಿನ ಸಂವೇದನಾಶೀಲತೆಯಿಂದ ಕಾರ್ಯನಿರ್ವಹಿಸಬೇಕು. ಕನ್ನಡದ ಮೊದಲ ರಾಜವಂಶ ಕದಂಬರ ರಾಜಧಾನಿಯಾಗಿದ್ದ ಬನವಾಸಿಯು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನ ಬರೆದ ಕಾಕುತ್ಸವರ್ಮ ಕೂಡಾ ಇಲ್ಲಿಯವರೇ ಆಗಿದ್ದಾರೆ ಎಂದರು. 

ಜಿಲ್ಲೆಯ ವಾಣಿಜ್ಯ ಕೇಂದ್ರಗಳು ಹಾಗೂ ಕೈಗಾರಿಕಾ ಕೇಂದ್ರಗಳ ಮುಂಭಾಗದ ನಾಮಫಲಕದಲ್ಲಿ ಶೇ. 60 ರಷ್ಟು ಕನ್ನಡ ಭಾಷೆೆಯಲ್ಲಿ ಹಾಗೂ ಶೇ. 40 ರಷ್ಟು ಇತರೆ ಭಾಷೆಯಲ್ಲಿ ಅಳವಡಿಸಲು ಕ್ರಮವಹಿಸಬೇಕು. ಪರವಾನಿಗೆ ನೀಡುವ ಸಂದರ್ಭದಲ್ಲಿಯೇ ಅವರುಗಳಿಂದ ಛಾಯಾಚಿತ್ರಗಳನ್ನು ಪಡೆದುಕೊಂಡು ವೀಕ್ಷಿಸಿ, ನಂತರ ಅನುಮತಿ ನೀಡಬೇಕು ಹಾಗೂ ಆಗಿಂದಾಗ್ಗೆ ಇವುಗಳ ಪರೀಶೀಲನೆ ಮಾಡಬೇಕು ಎಂದರು.  

ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ ಮಾತನಾಡಿ, ಕನ್ನಡ ಅಭಿವೃದ್ದಿ ಪ್ರಾಧಿಕಾರವು ರಾಜ್ಯಾದ್ಯಂತ 19 ಜಿಲ್ಲೆಗಳು ಮತ್ತು 17 ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ್ದು, 2008 ರ ನಂತರ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಕನ್ನಡ ಭವನ ಕಟ್ಟಡದ ಬಳಕೆ ಕುರಿತು ಗೊಂದಲಗಳಿದ್ದು, ಇದನ್ನು ಬಗೆಹರಿಸುವ ಮೂಲಕ ಕನ್ನಡ ಬೆಳವಣಿಗೆಗೆ ಪೂರಕ ವ್ಯವಸ್ಥೆ ಒದಗಿಸಬೇಕು,  ಕನ್ನಡ ಭಾಷೆೆಯ ಪರ ಕಾನೂನಾತ್ಮಕವಾಗಿ ಹೋರಾಟ ನಡೆಸಿದ ಕನ್ನಡ ಪರ ಹೋರಾಟ ಸಂಘಟನೆಗಳ ಸದಸ್ಯರುಗಳ ಮೇಲೆ ಹಾಕಿರುವ ಪ್ರಕರಣಗಳನ್ನು ಸರ್ಕಾರ ವಾಪಾಸು ಪಡೆಯಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಬೇಕು. ರಂಗ ಮಂದಿರ ನಿರ್ಮಾಣ ಕುರಿತಂತೆ ಉಸ್ತುವಾರಿ ಸಚಿವರ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಮೇಲೆ ಒತ್ತಡ  ತರಬೇಕು. ಕಚೇರಿಗಳಲ್ಲಿ ಕನ್ನಡ ಘೋಷ ವಾಕ್ಯ ಬರೆಸಬೇಕು, ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ ಆಗಬೇಕು, ಗೋವಾ ಕನ್ನಡರಿಗೆ ನಿಯಮಾನುಸಾರ ಸೌಲಭ್ಯಗಳನ್ನು ಒದಗಿಸಬೇಕು, ಅಸ್ಪತ್ರೆಗಳಲ್ಲಿ ಮರಣ ಪ್ರಮಾಣ ಪತ್ರದಲ್ಲಿ ಮರಣದ ಕಾರಣವನ್ನು  ಕನ್ನಡದಲ್ಲಿಯೇ ಇರುವ ಹಾಗೆ ಮತ್ತು ಆಸ್ಪತ್ರೆಯಲ್ಲಿ  ಓಷಧ ಚೀಟಿ ನೀಡುವಾಗ ರೋಗಿಗಳ ಹೆಸರನ್ನು ಕನ್ನಡದಲ್ಲಿಯೇ ನಮೂದು ಮಾಡುವ ಮೂಲಕ ವೈದ್ಯರುಗಳು ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳುಬೇಕು ಎಂದರು. 

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಮಾತನಾಡಿ, ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು 100ಅ ಬಳಸುತ್ತಿದ್ದು, ಕೇಂದ್ರ ಸರ್ಕಾರದ ಸಂಸ್ಥೆಗಳೊಂದಿಗೆ ಮಾತ್ರ ಇಂಗ್ಲೀಷ್ ಮೂಲಕ ಪತ್ರ ಸಂವಹನ ನಡೆಸುತಿದ್ದು, ಜಿಲ್ಲಾಡಳಿತದಿಂದ ಹೊರಡಿಸುವ ಸುತ್ತೋಲೆ ಟಿಪ್ಪಣಿಗಳು ಕನ್ನಡದಲ್ಲಿಯೇ ಇದ್ದು , ಸಾರ್ವಜನಿಕರ ಅರ್ಜಿಗಳಿಗೆ ಕನ್ನಡದಲ್ಲಿಯೇ ಉತ್ತರಿಸಲಾಗುತ್ತಿದೆ ಎಂದರು. 

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದೀಲೀಷ್ ಶಶಿ, ಪ್ರೋಬೇಷನರಿ ಐಎಎಸ್ ಅಧಿಕಾರಿ ಝುಪಿಶಾನ ಹಕ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ, ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಫಣಿ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.