ಶತಮಾನಗಳಿಂದ ಬಂತ ಅಲಿಖಿತ ನಿಯಮ ದೈವ ಭೀತಿಯಿಂದ ಹಿಂದೇಟು ಕ್ವಾರಿ ಮೀಸೆಯೂ ಬಿಡಂಗಿಲ್ಲ ಕರೆಸಿದ್ದೇಶ್ವರ ದೇವರ ಮೇಲೆ ಅಪಾರ ನಂಬಿಕೆ ಅಲಖನೂರಲ್ಲಿ ಮಹಡಿ ಮನೆ ಕಟ್ಟುವಂತಿಲ್ಲ
Unwritten rules that have been in place for centuries, fear of God, even the quarry moustache is not
ಲೋಕದರ್ಶನ ವರದಿ
ಮಹಾದೇವ ಅರಕೇರಿ
ಹಾರೂಗೇರಿ, 24 : ಈ ಗ್ರಾಮದಲ್ಲಿ ಎಷ್ಟೇ ಶ್ರೀಮಂತರಿದ್ದರೂ ಮಹಡಿ ಮನೆ ಕಟ್ಟುವಂತಿಲ್ಲ. ಊರಲ್ಲಿ ಯಾರೂ ಕ್ವಾರಿ ಮೀಸೆ ಬಿಡುವಂತಿಲ್ಲ. ಒಂದು ವೇಳೆ ಉದ್ಧಟತನದಿಂದ ಮಹಡಿ ಮನೆ ಕಟ್ಟಿದಲ್ಲಿ ಆ ಕುಟುಂಬವೇ ಸರ್ವನಾಶವಾಗುವ ಭೀತಿ...
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಕಳೆದೊಂದು ಶತಮಾನಕ್ಕಿಂತ ಹೆಚ್ಚಿನ ಅವಧಿಯಿಂದ ನಡೆದು ಬಂದಿರುವ ಅಲಿಖಿತ ನಿಯಮವಿದು. ಅಲಖನೂರ ಗ್ರಾಮದಲ್ಲಿ ಸುಮಾರು 4ರಿಂದ 5 ಸಾವಿರ ಮನೆಗಳಿದ್ದರೂ ಒಂದೇ ಒಂದು ಬಹುಮಹಡಿ ಮನೆಯಿಲ್ಲ. ಗ್ರಾಮದಲ್ಲಿರುವ ಎಲ್ಲ ಮನೆಗಳು ನೆಲಮಹಡಿಗಷ್ಟೇ ಸೀಮಿತವಾಗಿವೆ. ಗ್ರಾಮದಲ್ಲಿರುವ ಶ್ರೀಮಂತರೂ ಕರೆಸಿದ್ದೇಶ್ವರ ದೈವದ ಭೀತಿಯಿಂದ ಮಹಡಿ ಮನೆ ಕಟ್ಟಿಸುವ ಗೋಜಿಗೆ ಹೋಗಿಲ್ಲ.
ಗ್ರಾಮಸ್ಥರ ನಂಬಿಕೆ ಏನು? : ಸುಮಾರು 22 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಬಹುತೇಕರು ಕೃಷಿಕರು, ಸೈನಿಕರು, ನೌಕರಸ್ತರು ಹಾಗೂ ರಾಜಕೀಯ ಮುಖಂಡರಿದ್ದಾರೆ. ಗ್ರಾಮದ ಆರಾಧ್ಯ ದೈವ ಶ್ರೀ ಕರೆಸಿದ್ದೇಶ್ವರ. ಶ್ರೀ ಕರೆಸಿದ್ದೇಶ್ವರ ದೇವಸ್ಥಾನ ಎರಡಂತಸ್ತು ಹೊಂದಿದ್ದು, ಅದಕ್ಕೆ ಸರಿಸಮಾನ ಹಾಗೂ ಅದಕ್ಕಿಂತ ಹೆಚ್ಚು ಎತ್ತರಕ್ಕೆ ಮನೆ ನಿರ್ಮಾಣ ಮಾಡಿದಲ್ಲಿ ಕುಟುಂಬ ಸರ್ವನಾಶವಾಗುತ್ತದೆ ಎಂಬುದು ಗ್ರಾಮಸ್ಥರ ಬಲವಾದ ನಂಬಿಕೆ.
ಮನೆ ನಿರ್ಮಿಸಿದವರಿಗೆ ತೊಂದರೆ : ಕಳೆದ ಐದಾರು ದಶಕದ ಹಿಂದೆ ಗ್ರಾಮಸ್ಥರೊಬ್ಬರು ಭಂಡ ಧೈರ್ಯ ಮಾಡಿ ಎರಡನೇ ಮಹಡಿ ಮನೆ ನಿರ್ಮಿಸಿದ್ದರಂತೆ. ನಂತರ ಆ ಕುಟುಂಬ ಆರ್ಥಿಕ ಸಂಕಷ್ಟದ ಜೊತೆಗೆ ಕುಟುಂಬದ ಸದಸ್ಯರೂ ಕರೆಸಿದ್ದೇಶ್ವರನ ಅವಕೃಪೆಗೆ ಒಳಗಾಗಿ ನಾನಾ ಕಾಯಿಲೆ, ದೈಹಿಕ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದರು. ಮಹಡಿ ಮನೆ ಕೆಡವಿ ನೆಲ ಮಹಡಿಗೆ ಸೀಮಿತಗೊಳಿಸಿದ ನಂತರ ಸಂಕಷ್ಟ ಕಡಿಮೆಯಾಯಿತಂತೆ. ಹೀಗಾಗಿ ಶತಮಾನಗಳಿಂದ ಅಲಖನೂರ ಗ್ರಾಮದಲ್ಲಿ ಮಹಡಿ ಮನೆ ನಿರ್ಮಾಣವಾಗಿಲ್ಲ.
ಕ್ವಾರಿ ಮೀಸೆ ಬಿಡಂಗಿಲ್ಲ : ದೇಗುಲದಲ್ಲಿನ ಶ್ರೀ ಕರೆಸಿದ್ದೇಶ್ವರ ದೇವರಿಗೆ ಕೋರೆ ಮೀಸೆ ಇರುವುದರಿಂದ ಈ ಊರಲ್ಲಿರುವ ಯಾವೊಬ್ಬ ಪುರುಷರು ಕ್ವಾರೆ ಮೀಸೆ ( ಹ್ಯಾಂಡಲ್ ಬಾರ್ ಮೀಸೆ) ಬಿಟ್ಟಿಲ್ಲ. ಇಲ್ಲಿ ನಾಲ್ಕು ಪೂಜೇರಿಗಳ ಮನೆತನಗಳಿದ್ದು, ದೇವಸ್ಥಾನದಲ್ಲಿರುವ ಯಾವೊಂದು ವಸ್ತುವು ಈ ಪೂಜೇರಿಗಳ ಮನೆಗಳಲ್ಲಿ ಇರುವಂತಿಲ್ಲ. ಹೆಣ್ಣುಮಕ್ಕಳು ಕಾಲು ಗೆಜ್ಜೆ ಧರಿಸುವಂತಿಲ್ಲ. ಅಲ್ಲದೇ ಕೆಲವು ಪೂಜಾರಿಗಳ ಮನೆತನದಲ್ಲಿ ಯಾರೂ ಚಪ್ಪಲಿಯನ್ನೇ ಧರಿಸುವುದಿಲ್ಲ.
ಎಲ್ಲ ಕಾರ್ಯಕ್ಕೂ ದೈವದ ಒಪ್ಪಿಗೆ ಬೇಕು : ಅಲಖನೂರ ಗ್ರಾಮದ ಪ್ರತಿ ಮನೆಯಲ್ಲೂ ಕರೆಪ್ಪ, ಕರಿಸಿದ್ದ, ಮಾಳಪ್ಪ, ಬೀರ್ಪ, ಭರಮಪ್ಪ, ಕರೆವ್ವ, ಮಾಯವ್ವ, ಲಕ್ಕವ್ವ, ಯಂಕವ್ವ, ಯಲ್ಲವ್ವ ಹೆಸರು ಸಾಮಾನ್ಯವಾಗಿವೆ. ನವಜಾತ ಶಿಶುಗಳಿಗೆ ದೇವರ ಹೆಸರಿಗೆ ಹೊಂದಿಕೆಯಾಗುವ ನಾಮಕರಣ ಮಾಡುತ್ತಿರುವುದು ವಿಶೇಷ. ಗ್ರಾಮಸ್ಥರು ಶ್ರೀ ಕರೆಸಿದ್ದೇಶ್ವರನ ಒಪ್ಪಿಗೆ ಇಲ್ಲದೇ ಹೊಲದಲ್ಲಿ ಬೀಜ ಬಿತ್ತನೆಯಿಂದ ಹಿಡಿದು ಕುಟುಂಬದ ಯಾವೊಂದು ಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ಇಲ್ಲಿ ಪ್ರತಿಯೊಂದಕ್ಕೂ ಶ್ರೀ ಕರೆಸಿದ್ದೇಶ್ವರ ದೇವರ ಕೌಲು (ಒಪ್ಪಿಗೆ) ಬೇಕೆಬೇಕು. ಒಪ್ಪಿಗೆ ಇಲ್ಲದೇ ಅಲಖನೂರಲ್ಲಿ ಹುಲ್ಲು ಕಡ್ಡಿಯೂ ಅಲಗಾಡುವುದಿಲ್ಲ ಎಂಬ ಅಚಲ ನಂಬಿಕೆ ಗ್ರಾಮಸ್ಥರಲ್ಲಿದೆ.
( ಅಲಖನೂರ ಗ್ರಾಮದಲ್ಲಿ ಮಹಡಿ ಮನೆ ನಿರ್ಮಿಸುವ ಮೂಲಕ ಶ್ರೀ ಕರೆಸಿದ್ದೇಶ್ವರ ದೇವರ ಅವಕೃಪೆಗೆ ಒಳಗಾಗಲು ಯಾರೂ ಸಿದ್ಧರಿಲ್ಲ. ಮಹಡಿ ಮನೆ ನಿರ್ಮಿಸಿದಲ್ಲಿ ಹಾಗೂ ದೈವ ನಿರ್ಣಯಕ್ಕೆ ವಿರುದ್ಧವಾಗಿ ನಡೆದುಕೊಂಡಲ್ಲಿ ವ್ಯಕ್ತಿ ಹಾಗೂ ಕುಟುಂಬಕ್ಕೆ ಒಳಿತಾಗುವುದಿಲ್ಲ ಎಂಬ ನಂಬಿಕೆ ದೃಢವಾಗಿದೆ. - ನಾಗಪ್ಪ ಸಿಂಗಾಡಿ ಕಂಟಿಕಾರ, ಧರ್ಮದರ್ಶಿಗಳು, ಶ್ರೀ ಕರೆಸಿದ್ಧೇಶ್ವರ ದೇವಸ್ಥಾನ. ಅಲಖನೂರ)
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 