ಐತಿಹಾಸಿಕ ಕಾರ್ಯದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Unveiling of Anubhava Mantapa oil painting at Belgaum Suvarna Vidhansauda

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅನುಭವ ಮಂಟಪ ತೈಲವರ್ಣ ಚಿತ್ರ ಅನಾವರಣ 

ಬೆಳಗಾವಿ, ಸುವರ್ಣ ವಿಧಾನಸೌಧ (ವಿಧಾನಸಭೆ) ಡಿ. 09 :-ಹನ್ನೆರಡನೆ ಶತಮಾನದಲ್ಲಿ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನು ಈ ನಾಡಿನಲ್ಲಿ ಮಾಡಿದರು, ಸಮಾಜದಲ್ಲಿನ ಅಸಮಾನತೆ, ಜಾತಿ ವ್ಯವಸ್ಥೆ ತೊಲಗಿಸಿ, ಸಮ ಸಮಾಜ ನಿರ್ಮಾಣ ಮಾಡಬೇಕು ಎಂಬ ಪರಿಕಲ್ಪನೆಯಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ರಚಿಸಲಾಗಿದ್ದ ಅನುಭವ ಮಂಟಪದ ಮಾದರಿಯ ತೈಲ ವರ್ಣ ಚಿತ್ರವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅನಾವರಣಗೊಳಿಸುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯವಾಗಿದ್ದು, ಬೆಂಗಳೂರಿನ ವಿಧಾನಸೌಧದಲ್ಲಿಯೂ ಅನುಭವ ಮಂಟಪದ ಬೃಹತ್ ತೈಲವರ್ಣ ಚಿತ್ರ ಅನಾವರಣಗೊಳಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಅನುಭವ ಮಂಟಪದ ತೈಲವರ್ಣ ಚಿತ್ರ ಅನಾವರಣಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಅಸಮಾನತೆ ಹೋಗಲಾಡಿಸಿ ಸಮ ಸಮಾಜ ನಿರ್ಮಾಣದ ಕನಸನ್ನು ಬಸವಾದಿ ಶರಣರು ಹೊಂದಿದ್ದರು.  ಕರ್ಮ ಸಿದ್ಧಾಂತವನ್ನು ಬಸವಾದಿ ಶರಣರು ತಿರಸ್ಕರಿಸಿದ್ದರು.  ಮೌಢ್ಯ ಕಂದಾಚಾರಗಳನ್ನು ಹುಟ್ಟುಹಾಕಿ, ಅದನ್ನು ನಂಬುವಂತೆ ಮಾಡಿ, ಜಾತಿ ವ್ಯವಸ್ಥೆ, ಅಸಮಾನತೆ, ಮೇಲುಕೀಳು ನಿರ್ಮಾಣ ಮಾಡುವುದು ಧರ್ಮವಲ್ಲ.  ಬಸವಣ್ಣನವರ ವ್ಯಾಖ್ಯಾನದಂತೆ “ದಯೆ ಇಲ್ಲದ ಧರ್ಮ ಯಾವುದಯ್ಯ, ದಯವೇ ಧರ್ಮದ ಮೂಲವಯ್ಯ”.  ಧರ್ಮವನ್ನು ವ್ಯಾಖ್ಯಾನ ಮಾಡಿ ಎಲ್ಲ ವರ್ಗದವರಿಗೂ ಅರ್ಥವಾಗುವ ರೀತಿಯಲ್ಲಿ ಅವರು ಹೇಳಿದ್ದರು.  ಜಾತಿ ಆಧಾರದಲ್ಲಿ ಪ್ರತಿಭೆಯನ್ನು ಗುರುತಿಸುವುದು ಹಾಗೂ ಶ್ರೇಷ್ಠತೆ, ಕಳಪೆ ತೀರ್ಮಾನ ಆಗುತ್ತಿತ್ತು.  ಆದರೆ ಬಸವಾದಿ ಶರಣರು ಇದನ್ನು ವಿರೋಧಿಸಿದರು.  ಕುವೆಂಪು ಅವರು ಹೇಳಿದಂತೆ “ಪ್ರತಿಯೊಬ್ಬರೂ ಹುಟ್ಟುವಾಗ ವಿಶ್ವ ಮಾನವರಾಗಿ ಹುಟ್ಟುತ್ತಾರೆ, ಆದರೆ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ”.  ಬಸವಣ್ಣನವರು “ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ, ಇವ ನಿಮ್ಮ ಮನೆಯ ಮಗನೆಂದಿನಿಸೆಯ್ಯ” ಎಂದರು.  ಕನಕದಾಸರು “ಕುಲ ಕುಲ ಎಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲವನೇನಾದರೂ ಬಲ್ಲಿರಾ” ಎಂದರು ಇದೇ ರೀತಿ ಅನೇಕ ದಾರ್ಶನಿಕರು ಧರ್ಮಾಧಿಕಾರಿಗಳು ಜಾತಿ ವ್ಯವಸ್ಥೆ ಸರಿಯಲ್ಲ ಎಂದರು.  ಆದರೆ ಪಟ್ಟಭದ್ರ ಹಿತಾಸಕ್ತರು ಮಾತ್ರ ಜಾತಿ ವ್ಯವಸ್ಥೆಯಿಂದ ಲಾಭ ಪಡೆಯಲು ಬಯಸುವವರು ಮಾತ್ರ ಜಾತಿಯನ್ನು ಪ್ರತಿಪಾದಿಸುತ್ತಾರೆ. ಜನರಿಂದ ಜನರಿಗೋಸ್ಕರ ಜನರಿಗಾಗಿ ಎಂಬುದನ್ನು ಒಪ್ಪಿಕೊಂಡು, ಅನುಭವ ಮಂಟಪದ ಸಿದ್ಧಾಂತದಂತೆಯೇ ನಾವು ಸರ್ಕಾರವನ್ನು ನಡೆಸುತ್ತಿದ್ದೇವೆ. 

ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ಅವರು ತಳಸಮುದಾಯದಿಂದ ಬಂದವರು.  ಹನ್ನೆರಡನೆ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಜಾತಿ ಧರ್ಮ, ಲಿಂಗ ತಾರತಮ್ಯವಿಲ್ಲದೆ ಜಗತ್ತಿಗೆ ಮೊದಲ ಬಾರಿಗೆ ಸಂಸತ್ ಅನ್ನು ಪರಿಚಯಿಸಿದ್ದರು.  ಎಲ್ಲ ಜಾತಿ, ವರ್ಗ, ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದರು.  ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ಚರ್ಚೆ ಅನುಭವ ಮಂಟಪದಲ್ಲಿ ನಡೆಯುತ್ತಿತ್ತು.  ಬುದ್ಧನ ಕಾಲದಲ್ಲಿಯೂ ಕೂಡ ಇದೇ ರೀತಿಯಲ್ಲಿ ಸಂಸತ್ ಇತ್ತು ಎಂಬುದನ್ನು ಓದಿದ್ದೇವೆ.   ಬುದ್ಧ ಬಸವ ಅಂಬೇಡ್ಕರ್, ಗಾಂಧೀಜಿ ಎಲ್ಲರೂ ಸಮಾಜದಲ್ಲಿ ಸಮ ಸಮಾಜ ನಿರ್ಮಾಣ ಮಾಡಬೇಕು ಎಂಬ ಆಶಯವನ್ನೇ ಹೊಂದಿದ್ದರು ಎಂದರು. 

ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ್ ಅವರು ಮಾತನಾಡಿ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅನುಭವ ಮಂಟಪದ ತೈಲಚಿತ್ರ ಅನಾವರಣ ಮಾಡಿರುವುದು ಶ್ಲಾಘನೀಯ.  ಜಾತಿ ತಾರತಮ್ಯ, ಲಿಂಗ ತಾರತಮ್ಯ ತೊಡೆದುಹಾಕುವ ಪ್ರಯತ್ನ 12ನೇ ಶತಮಾನದಲ್ಲಿ ಆಗಿನ ಅನುಭವ ಮಂಟಪದಲ್ಲಿ ಆಗಿತ್ತು.  ಇದು ನಡೆದು 10 ಶತಮಾನಗಳೇ ಕಳೆದಿವೆ, ಆದರೆ ಕಾಲ ಕಳೆದಿದೆಯೇ ಹೊರತು, ಜಾತಿ ವ್ಯವಸ್ಥೆ ಹಾಗೂ ಜಾತಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ.  ರಾಜಕೀಯ ಹಾಗೂ ಬೇರೆ ಬೇರೆ ಸೌಲಭ್ಯಗಳನ್ನು ಪಡೆಯಲೇಬೇಕು ಎಂಬ ದೃಷ್ಟಿಯಿಂದ ಹಾಗೂ ದುರಾಸೆಯ ಪ್ರತಿಫಲವೇ ಈಗಿನ ಜಾತಿ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲು ಕಾರಣವಾಗಿದ್ದು, ಜಾತಿ ವ್ಯವಸ್ಥೆಯನ್ನು ತೊಲಗಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.    

ಸಮಾಜ ಕಲ್ಯಾಣ ಸಚಿವ ಡಾ. ಹೆಚ್‌.ಸಿ. ಮಹದೇವಪ್ಪ ಅವರು ಮಾತನಾಡಿ, ಧರ್ಮಾಂಧತೆ, ಜಾತೀಯತೆ ನಮ್ಮೆಲ್ಲರ ಅಭಿವೃದ್ಧಿಗೆ ಮಾರಕವಾಗಿದೆ.  12ನೇ ಶತಮಾನದಲ್ಲಿ ಧರ್ಮವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುತ್ತಿದ್ದರು.  ತನ್ನ ವಚನ ಸಾಹಿತ್ಯ ಚಳುವಳಿ ಮೂಲಕ ನಾವೆಲ್ಲ ಒಂದೇ ಎಂದು ಸಾರಿದರು.  ಪ್ರಪಂಚಕ್ಕೆ ಮಾದರಿಯಾದರು.  ಬಸವಣ್ಣನವರ ಆಲೋಚನೆಗಳನ್ನು ಕೇವಲ ಭಾಷಣದ ವಸ್ತುವನ್ನಾಗಿಸದೆ, ಪ್ರಜಾಪ್ರಭುತ್ವನ್ನು ಬಲಪಡಿಸಲು ಯತ್ನಿಸೋಣ ಎಂದರು. 

ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ಅನುಭವ ಮಂಟಪ ವಿಶ್ವದ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆ ಹೊಂದಿದೆ.  ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದು ಅನುಭವ ಮಂಟಪ.  ಹೆಣ್ಣಿಗೆ, ಮಣ್ಣಿಗೆ, ಅಧಿಕಾರಕ್ಕಾಗಿ ಕ್ರಾಂತಿಗಳಾಗಿದ್ದನ್ನು ನಾವು ಕೇಳಿದ್ದೇವೆ, ಆದರೆ, ಸಮಾಜದ ಏಳಿಗೆಗೆ ಕ್ರಾಂತಿಯಾಗಿದ್ದು 12ನೇ ಶತಮಾನದಲ್ಲಿ ಬಸವಾದಿ ಶರಣರ ಕಾಲದಲ್ಲಿ ಮಾತ್ರ.  2025 ರಲ್ಲಿ 670 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಅನುಭವ ಮಂಟಪದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಕಾರ್ಯ ಮಾಡುತ್ತೇವೆ ಎಂದರು. 

ಅನುಭವ ಮಂಟಪದ ತೈಲಚಿತ್ರ ಅನಾವರಣ ಕುರಿತಂತೆ ಸಂಸದೀಯ ವ್ಯವಹಾರಗಳ ಸಚಿವ ಹೆಚ್‌.ಕೆ. ಪಾಟೀಲ್, ಸದನದ ಸದಸ್ಯರುಗಳಾದ ಅರವಿಂದ ಬೆಲ್ಲದ್, ಬಸವರಾಜ ರಾಯರಡ್ಡಿ, ಶಶಿಕಲಾ ಜೊಲ್ಲೆ, ಸೇರಿದಂತೆ ಹಲವು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು, ಅನುಭವ ಮಂಟಪದ ತೈಲವರ್ಣ ಚಿತ್ರ ಅನಾವರಣಗೊಳಿಸಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.