ಬೆಂಗಳೂರು,ಅ 14: ಮೈಸೂರು ಜಿಲ್ಲೆಯನ್ನು ವಿಭಜಿಸಿ ದೇವರಾಜ್ ಅರಸು ಹೆಸರಿನಲ್ಲಿ ಪ್ರತ್ಯೇಕ ಜಿಲ್ಲೆ ರಚಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ನಿವಾಸ ಡಾಲರ್ಸ್ ಕಾಲೋನಿಯ ಧವಳಗಿರಿಯಲ್ಲಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜ ನಗರ,ಸೇರಿದಂತೆ ಹಲವಾರು ಜಿಲ್ಲೆಯಗಳನ್ನು ವಿಭಜಿಸಿ ನೂತನ ಜಿಲ್ಲೆ ಮಾಡಿ ದಂತೆ ಹೊಸ ಜಿಲ್ಲೆ ರಚಿಸಿ. ಹೊಸ ಜಿಲ್ಲೆಗೆ ಹುಣಸೂರು ಸೇರಿದಂತೆ 6 ತಾಲೂಕು ಗಳನ್ನು ಸೇರಿಸಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಳಿ ಪ್ರಸ್ತಾಪ ಮಾಡಲಾಗಿದ್ದು ಶೀಘ್ರದಲ್ಲೇ ಜನ ಪ್ರತಿನಿಧಿಗಳನ್ನ ಕರೆದು ಸಭೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹುಣಸೂರು,ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ ಜೊತೆಗೆ ಎರಡು ಹೊಸ ತಾಲ್ಲೂಕುಗಳಾಗಿ ಸರಗೂರು ಹಾಗೂ ಸಾಲಿಗ್ರಾಮ ಸೇರಿಸಿ ಪ್ರತ್ಯೇಕ ಜಿಲ್ಲೆ ರಚನೆ ಮಾಡಿ ಎಂದು ಮನವಿ ಮಾಡಿದ್ದೇನೆ. ಈ ಪ್ರಸ್ತಾವನೆಯನ್ನ ಸರ್ಕಾರದ ಮುಂದೆ ಇಡುತ್ತೇವೆ. ಪ್ರತ್ಯೇಕ ಜಿಲ್ಲೆಗೆ ರಚನೆ ಆಗ್ರಹಿಸಿ ಒಂದು ಹೋರಾಟ ಸಮಿತಿ ರಚಿಸಿ ಹೋರಾಟ ಮಾಡುತ್ತೇವೆ.ಡಿ. ದೇವರಾಜ ಅರಸ್ ಹೆಸರು ಅಜರಾಮರವಾಗಿ ಉಳಿಯಬೇಕು.ರಾಜ್ಯ, ದೇಶಕ್ಕೆ ಅವರ ಕೊಡುಗೆ ಅಪಾರ.ಹುಣಸೂರು ಜಿಲ್ಲೆಯಾ ದರೆ ಅವರ ಹೆಸರಿಡುವುದರಿಂದ ಅರಸು ಅವರ ಗೌರವ ಇನ್ನಷ್ಟು ಹೆಚ್ಚಾಗಲಿದೆ ಎಂದಿದ್ದಾರೆ. ಹುಣಸೂರು ಅತ್ಯಂತ ಸಂಪದ್ಭರಿತ ತಾಲ್ಲೂಕಾಗಿದೆ.ಮೂರು ನದಿಗಳು ತಾಲೂಕಿನಲ್ಲಿ ನಲ್ಲಿ ಹರಿಯುತ್ತವೆ.ಬಂಡಿಪುರ,ನಾಗರಹೊಳೆಯಂತಹ ಅರಣ್ಯ ಸಂಪತ್ತು ಇದೆ. ವಿಶ್ವಪ್ರಸಿದ್ದ ತಂಬಾಕು ಬೆಳೆಯಿಂದ ಸಾವಿರಾರು ಕೋಟಿ ವ್ಯವಹಾರದ ಮೂಲ ವಾಗಿದೆ. ಮಲೆನಾಡಿಗೆ ಹುಣಸೂರು ಹೆಬ್ಬಾಗಿಲಿನಂತಾಗುತ್ತದೆ. ಹೊಸ ತಾಲೂಕುಗಳು ಹಾಗೂ ಹಳೆ ತಾಲ್ಲೂಕುಗಳನ್ನ ಸೇರಿಸಿ ಒಂದು ಜಿಲ್ಲೆ ಮಾಡಿ. ಇದರಿಂದ ಆಡಳಿತ ಮತ್ತು ಅಭಿವೃದ್ದಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೊಡ್ಡದಾಗಿರುವ ಮೈಸೂರು ಜಿಲ್ಲೆಯ 4ತಾಲೂಕುಗಳನ್ನ ದೇವರಾಜ ಅರಸು ಜಿಲ್ಲೆಗೆ ಸೇ ರಿಸಿ. ಹುಣಸೂರನ್ನೇ ಕೇಂದ್ರವಾಗಿಟ್ಟುಕೊಂಡು ಒಂದು ಜಿಲ್ಲೆಯನ್ನಾಗಿ ಘೋಷಣೆ ಮಾಡಿ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಒಪ್ಪುವ ವಿಶ್ವಾಸ ಇದೆ. ದೇವರಾಜ ಅರಸು ಅವರನ್ನು ವಿರೋಧಿಸುವ ಜನರು ಯಾರೂ ಇಲ್ಲ. ಇದು ಅರಸು ಅವರಿಗೆ ಸಲ್ಲುವ ಗೌರವದ ಪ್ರತೀಕ. ಇದರಿಂದ ಪ್ರವಾಸೋದ್ಯಮವೂ ಅಭಿವೃದ್ದಿಯಾಗಲಿದೆ. ಉಪಚುನಾವಣೆಗೂ ಪ್ರತ್ಯೇಕ ಜಿಲ್ಲೆಗೆ ಸಂಬಂಧ ಇಲ್ಲ ಎಂದಿದ್ದಾರೆ. ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯ ನಗರ ಜಿಲ್ಲೆ ರಚನೆಗೂ ಈ ವಿಚಾರಕ್ಕೂ ಸಂಬಂಧ ಇಲ್ಲ. ಆದರೆ, ಹುಣಸೂರು ತಾಲ್ಲೂಕು ಡಿ.ದೇವರಾಜ ಅರಸು ಜಿಲ್ಲೆಯಾಗಬೇಕು ಎಂಬದಷ್ಟೇ ನಮ್ಮ ಉದ್ದೇಶವೆಂದರು. 6 ತಾಲೂಕಿನ ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಜೊತೆ ಆದಷ್ಟು ಶೀಘ್ರದಲ್ಲಿ ಸಭೆ ಸೇರಿ ಹೊಸ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಒಂದು ಹೋರಾಟ ಸಮಿತಿಯನ್ನ ರಚನೆ ಮಾಡುತ್ತೇವೆ.ಆ ನಂತರ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತದೆ ಎಂದರು. ಮಾಜಿ ಉಪ ಮುಖ್ಯಮಂತ್ರಿ,ಕಾಂಗ್ರೆಸ್ ಮುಖಂಡ ಡಾ.ಜಿ. ಪರಮೇಶ್ವರ್ ಮೇಲೆ ಐಟಿ ದಾಳಿ ಪ್ರಶ್ನೆಗೆ ಉತ್ತರಿಸಿದ ಅವರು, ಪರಮೇಶ್ವರ್ ಅವರೇ ಈ ವಿಚಾರವನ್ನು ಸ್ವತಃ ರಾಜಕಾರಣಗೊಳಿಸಬಾರದು. ಪರಮೇಶ್ವರ್ ಹೇಳಿರುವಾಗ ಮಿಕ್ಕವರು ರಾಜಕಾರಣ ಗೊಳಿಸುವುದಕ್ಕೆ ಹೋಗುತ್ತಿದ್ದಾರೆ ಇದು ಸರಿಯಲ್ಲ ಎಂದು ಅವರು ತಿಳಿಸಿದರು.