ಉನ್ನಾವ್ ಪ್ರಕರಣ: ಸಂತ್ರಸ್ತೆ ಹತ್ಯೆ ಯತ್ನ ಖಂಡಿಸಿ ಪ್ರತಿಭಟನೆ

 ಧಾರವಾಡ 02: ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಜೂನ್ 2017 ರಂದು ಯುವತಿಯ ಮೇಲೆ ಅತ್ಯಾಚಾರ ಘಟನೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಅಲ್ಲಿನ ಬಿಜೆಪಿ ಶಾಸಕ ಕುಲದೀಪ್ ಸಿಂಗ್ರವರು ಸಂತ್ರಸ್ತೆಯ ಪರವಾಗಿರುವ ಎಲ್ಲಾ ಸಾಕ್ಷಾಧಾರಗಳನ್ನು ನಾಶ ಮಾಡಲು ಹೊರಟಿರುವ ಕೃತ್ಯವವನ್ನು ಖಂಡಿಸಿ aimss ವತಿಯಿಂದ ಧಾರವಾಡ ನಗರದ ವಿವೆಕಾನಂದ ವೃತ್ತದಲ್ಲಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. 

ಪ್ರತಿಭಟನೆಯನ್ನು ಉದ್ದೇಶಿಸಿ aimss  ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮೀ ದೇವತ್ಕಲ್ ಮಾತನಾಡುತ್ತಾ, ಅಪರಾಧಿಗಳು ಸಂತ್ರಸ್ತೆಯ ಕಾರಿಗೆ ಲಾರಿ(ನಂಬರ್ ಪ್ಲೇಟ್ಗೆ ಕಪ್ಪು ಬಣ್ಣ ಬಳಿದಿದ್ದ)ಯಿಂದ ಅಪಘಾತ ಮಾಡಿಸಿ ಕೊಲೆಗೆ ಯತ್ನಿಸಿರುವುದು ಖಂಡನೀಯ. ದೇಶದೆಲ್ಲೆಡೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಇಂತಹ ಘಟನೆಗಳು ಹೆಚ್ಚುತ್ತಿರುವುದು ವಿಷಾದನೀಯ. ನ್ಯಾಯಾಂಗ, ಪೋಲಿಸ್,ರಾಜಕೀಯ ವ್ಯವಸ್ಥೆಗಳು ಕೊಳೆತು ಹೋಗಿದ್ದು, ಮಹಿಳೆಯರಿಗೆ ನ್ಯಾಯ ಕೊಡುವಲ್ಲಿ ವಿಫಲವಾಗಿವೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಅವಳ ಪರವಾಗಿ ಧ್ವನಿಯೆತ್ತೋಣ, ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡೋಣ ಎಂದು ಕರೆ ಕೊಟ್ಟರು.

aimss  ಜಿಲ್ಲಾ ಉಪಾಧ್ಯಕ್ಷ ಗಂಗಾ ಕೋಕರೆ ಮಾತನಾಡುತ್ತಾ, ಉನ್ನಾವ್ ಜಿಲ್ಲೆಯಲ್ಲಿ ಅತ್ಯಾಚಾರ ನಡೆದು 2 ವರ್ಷಗಳು ಆದರೂ ಅವಳಿಗೆ ನ್ಯಾಯ ಸಿಗದಿರುವುದು ಒಂದೆಡೆಯಾದರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಶಾಸಕ ಕುಲದೀಪ್ ಸಿಂಗ್ ಅವಳ ಕುಟುಂಬದ ನಾಶಕ್ಕೆ ಕಾರಣರಾಗಿದ್ದಾರೆ. ಜನಪ್ರತಿನಿಧಿಯಾಗಿದ್ದುಕೊಂಡು ಇಂತಹ ಕೃತ್ಯವನ್ನು ಎಸಗಿರುವ ಆರೋಪಿಗೆ ನಿದರ್ಶನೀಯ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.

 aimss  ಜಿಲ್ಲಾ ಅಧ್ಯಕ್ಷ ಮಧುಲತಾ ಗೌಡರ್, ಜಂಟಿ ಕಾರ್ಯದರ್ಶಿ ದೇವಮ್ಮ, ಸಂಘಟನೆಯ ಇತರ ಪದಾಧಿಕಾರಿಗಳಾದ ಭಾಗ್ಯಶ್ರೀ ಮಿಟ್ಟಿಮನಿ, ಪ್ರಮೀಳಾ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.