ಬೆಂಗಳೂರು, ಜ 28 : ಮುಖ್ಯಮಂತ್ರಿಗಳ ನಮ್ಮ ಬೆಂಗಳೂರು ಯೋಜನೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಸ್ಥಗಿತಕ್ಕೆ ಹೊರಡಿಸಿರುವ ಆದೇಶದ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ದಾಸರಹಳ್ಳಿ–ರಾಚೇನಹಳ್ಳಿ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣೆ ಟ್ರಸ್ಟ್ ಅಧ್ಯಕ್ಷ ಕೆ.ನವೀನ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಪೀಠ ಮಂಗಳವಾರ ಈ ಆದೇಶ ನೀಡಿದೆ.
ರಾಜ್ಯ ಸರ್ಕಾರ 2019ರ ಫೆಬ್ರುವರಿ1ರಲ್ಲಿ ಕಾಮಗಾರಿಗಳಿಗೆ ಆದೇಶ ಹೊರಡಿಸಿತ್ತು. ಆದರೆ, ಅದನ್ನು ಸ್ಥಗಿತಗೊಳಿಸಿರುವುದರಿಂದ ಯೋಜನಾ ವೆಚ್ಚ ಏರಿಕೆಯಾಗಿ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಕಾಮಗಾರಿ ಮುಂದುವರಿಸಲು ನಿರ್ದೇಸಿಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
ಆಗ ನ್ಯಾಯಪೀಠ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಯಾವ ಕಾನೂನಿನ ವ್ಯಾಪ್ತಿಯಲ್ಲಿ ಟಿಪ್ಪಣಿ ಬರೆದಿದ್ದಾರೆ ಎಂದು ಪ್ರಶ್ನಿಸಿತು.