ಅಂಡರ್ 19 ವಿಶ್ವಕಪ್: ಭಾರತದ ಸವಾಲು ಎದುರಿಸಲಿದೆ ಕಿವೀಸ್

ನವದೆಹಲಿ, ಜ.23 : ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಮೂರನೇ ಪಂದ್ಯದಲ್ಲಿ ಶುಕ್ರವಾರ ನ್ಯೂಜಿಲೆಂಡ್ ತಂಡದ ಸವಾಲು ಎದುರಿಸಲಿದೆ.

“ಎ” ಗುಂಪಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಎಂಟರ ಘಟ್ಟಕ್ಕೂ ಮುನ್ನ ಗೆಲುವಿನ ಲಯವನ್ನು ಮುಂದುವರಿಸಲು ಟೀಮ್ ಇಂಡಿಯಾ ಪ್ಲಾನ್ ಮಾಡಿಕೊಂಡಿದೆ. ಆಡಿದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 90 ರನ್ ಜಯ ಸಾಧಿಸಿರುವ ಪ್ರೀಯಂ ಗರ್ಗ್ ಪಡೆ, ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ 10 ವಿಕೆಟ್ ಗಳ ಸುಲಭ ಜಯ ದಾಖಲಿಸಿತ್ತು. ಈಗ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ.  

ನ್ಯೂಜಿಲೆಂಡ್ ಹಾಗೂ ಜಪಾನ್ ನಡುವಿನ ಮೊದಲ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಕಿವೀಸ್ ಶ್ರೀಲಂಕಾ ತಂಡವನ್ನು ಮೂರು ವಿಕೆಟ್ ಜಯ ದಾಖಲಿಸಿತ್ತು.  

ಭರ್ಜರಿ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಬ್ಬರಿಸಬಲ್ಲದು. ಪ್ರೀಯಂ ಗರ್ಗ್, ಯಶಸ್ವಿ ಜಸ್ವಾಲ್, ತಿಲಕ್ ವರ್ಮಾ, ದಿವ್ಯಾಂಶು ಸಕ್ಸೆನಾ ಬ್ಯಾಟಿಂಗ್ ನಲ್ಲಿ ತಂಡಕ್ಕೆ ನೆರವಾಗಬಲ್ಲರು. ರವಿ ಬಷ್ನೋಯಿ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್ ವಿಕೆಟ್ ಬೇಟೆ ನಡೆಸಿ ತಂಡಕ್ಕೆ ನೆರವಾಗಬಲ್ಲರು.

ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲಾಢ್ಯವಾಗಿದೆ. ಈ ಪಂದ್ಯವನ್ನು ಗೆದ್ದು ಕಿವೀಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾಮಕ್ಕೆ ಬಡ್ತಿ ಪಡೆಯುವ ಕನಸು ಕಾಣುತ್ತಿದೆ.