ಬೆಂಗಳೂರು, ಫೆ 20, ನಗರದಲ್ಲಿ ಸಂಜೆ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಎನ್ಆರ್ಸಿ ವಿರೋಧಿಸಿ ಪ್ರತಿಭಟನೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದರೇ, ಆಯೋಜಕರೇ ಹೊಣೆಗಾರರು ಎಂದು ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.ಸಂಸದ ಅಸದುದ್ದೀನ್ ಉವೈಸಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.ಸದಾ ವಿವಾದಾತ್ಮಕ ಹೇಳಿಕೆ ನೀಡುವ ಅಸದುದ್ದೀನ್ ಉವೈಸಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿರುವುದರಿಂದ ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, “ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ವಾಕ್ ಸ್ವಾತಂತ್ರ್ಯದ ಜತೆ ವಾಕ್ ಜವಾಬ್ದಾರಿಯೂ ಇರಬೇಕು. ಪ್ರತಿಭಟನೆಯಲ್ಲಿ ಏನೇ ಸಂಭವಿಸಿದರೂ ಅದಕ್ಕೆ ಪ್ರತಿಭಟನೆಯ ಆಯೋಜಕರೇ ಹೊಣೆ” ಎಂದು ಹೇಳಿದ್ದಾರೆ.ಇಂದು ಸಂಜೆ ನಡೆಯಲಿರುವ ಪ್ರತಿಭಟನೆಗೆ ಎಲ್ಲಾ ರೀತಿಯ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.