ವಾಷಿಂಗ್ಟನ್, ಏಪ್ರಿಲ್ 15, ಕರೋನವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಿಸುವಲ್ಲಿ ವಿಫಲವಾಗಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ)ಗೆ ತಾತ್ಕಾಲಿಕವಾಗಿ ಹಣಕಾಸು ನೆರವು ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಮಂಗಳವಾರ ಶ್ವೇತಭವನದಲ್ಲಿ ಕರೋನವೈರಸ್ ಕುರಿತ ಪ್ರತಿದಿನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಡಬ್ಲ್ಯುಎಚ್ಒ ತನ್ನ ಮೂಲ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದು, ಇದಕ್ಕೆ ಸಂಸ್ಥೆ ಜವಾಬ್ದಾರಿ ಹೊರಬೇಕಿದೆ ಎಂದು ಹೇಳಿದ್ದಾರೆ. ‘ವಿಶ್ವ ಆರೋಗ್ಯ ಸಂಸ್ಥೆಗೆ ಧನಸಹಾಯವನ್ನು ನಿಲ್ಲಿಸುವಂತೆ ಆಡಳಿತಕ್ಕೆ ಸೂಚಿಸುತ್ತಿದ್ದೇನೆ.ಕೊರೊನವೈರಸ್ ನಿಗ್ರಹಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರದ ಬಗ್ಗೆ ಪರಿಶೀಲಿಸಲಾಗುವುದು.’ ಎಂದು ಟ್ರಂಪ್ ಹೇಳಿದ್ದಾರೆ. ಚೀನಾದಲ್ಲಿ ವಸ್ತು ಸ್ಥಿತಿಯನ್ನು ತಿಳಿಯಲು ಅಲ್ಲಿನ ಪಾರದರ್ಶಕತೆಯ ಕೊರತೆಯನ್ನು ತಿಳಿಯಲು ಡಬ್ಲ್ಯೂಎಚ್‍ಒ ವೈದ್ಯಕೀಯ ತಜ್ಞರನ್ನು ಕಳುಹಿಸಿದ್ದರೆ ಸೋಂಕು ನಿಯಂತ್ರಿಸಬಹದುದಿತ್ತು. ಮತ್ತು ಅಪಾರ ಸಾವು ತಡೆಯಬಹುದಿತ್ತು. ಅಲ್ಲದೆ, ವಿಶ್ವಾದ್ಯಂತ ಆರ್ಥಿಕ ನಷ್ಟವನ್ನೂ ತಪ್ಪಿಸಬಹುದಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ, ಪ್ರತಿವರ್ಷ 400ರಿಂದ 500 ದಶಲಕ್ಷ ಡಾಲರ್ ಹಣಕಾಸು ಸಹಾಯವನ್ನು ಡಬ್ಲ್ಯೂಎಚ್‍ಒಗೆ ಒದಗಿಸುತ್ತಿದೆ. ಸದ್ಯದ ಸಮಯದಲ್ಲಿ ಅಮೆರಿಕದ ಕ್ರಮ ಸಮಯೋಚಿತವಲ್ಲ ಎಂದು ವಿಶ್ವಸಂಸ್ಥೆ ಮಹಾನಿರ್ದೇಶಕ ಅಂಟೊನಿಯೊ ಗುಟೇರಸ್ ಹೇಳಿದ್ದಾರೆ. ಎಲ್ಲರೂ ಒಗ್ಗೂಡಿ ಮಾರಕ ಸೋಂಕಿನ ವಿರುದ್ಧ ಹೋರಾಡಬೇಕಾದ ಸಮಯದಲ್ಲಿ ಅಮೆರಿಕದ ಈ ಕ್ರಮವನ್ನು ಯಾರೂ ನಿರೀಕ್ಷಿಸಲಾರರು ಎಂದು ಅವರು ಹೇಳಿದ್ದಾರೆ.