ವಾಷಿಂಗ್ಟನ್, ಏ ೭, ಭಾರತ ತನ್ನ ದೇಶಕ್ಕೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ರವಾನಿಸದಿದ್ದರೆ ಖಂಡಿತವಾಗಿಯೂ ವಾಣಿಜ್ಯ ಪ್ರತೀಕಾರ ಕೈಗೊಳ್ಳಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.ಭಾರತದೊಂದಿಗೆ, ಅಮೆರಿಕಾ ಉತ್ತಮ ಸಂಬಂಧ ಹೊಂದಿದ್ದು,.... ಅದು ಹಾಗೆಯೇ ಮುಂದುವರಿಯಲಿದೆ ಎಂದು ನಾವು ಭಾವಿಸುತ್ತೇವೆ. ಪ್ರಪಂಚವನ್ನು ಬಾಧಿಸುತ್ತಿರುವ ಕೊರೊನಾ ವೈರಸ್ ನಿರ್ಮೂಲನೆಗೆ ಮಲೇರಿಯಾ ರೋಗ ತಡೆಗಟ್ಟುವ ಹೈಡ್ರಾಕ್ಸಿ ಕ್ಲೋರೊಕ್ವಿನ್ ಮಾತ್ರೆಗಳ ಬಳಕೆ ಉತ್ತಮ ಫಲಿತಾಂಶ ಕಂಡು ಬಂದಿರುವ ಹಿನ್ನಲೆಯಲ್ಲಿ ಅವುಗಳನ್ನು ರಫ್ತು ಮಾಡುವಂತೆ ಡೊನಾಲ್ಡ್ ಟ್ರಂಪ್ ಭಾರತವನ್ನು ಕೋರಿದ್ದಾರೆ. ಈ ಸಂಬಂಧ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದೂರವಾಣಿ ಮಾತುಕತೆಯನ್ನೂ ನಡೆಸಿದ್ದಾರೆ.
ಇನ್ನೂ ಕೋವಿಡ್ -೧೯ ಅಮೆರಿಕಾದಲ್ಲಿ ತೀವ್ರ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ, ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ .. ಅನ್ಯ ದೇಶಗಳಿಗೆ ಹೈಡ್ರಾಕ್ಸಿ ಕ್ಲೋರೊಕ್ವಿನ್ ರಫ್ತುನ್ನು ಭಾರತ ನಿಷೇಧಿಸಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಭಾರತ ಇತರ ದೇಶಗಳಿಗೆ ರಫ್ತು ಮಾಡುವುದನ್ನು ನಿಲ್ಲಿಸಿದೆ ಎಂಬುದು ಗೊತ್ತಿದೆ. ಆದರೆ, ನಾನು ಭಾನುವಾರ ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ನಮ್ಮಿಬ್ಬರ ಮಾತುಕತೆ ಫಲಪ್ರದವಾಗಿದೆ. ಹಲವು ವರ್ಷಗಳಿಂದ, ಭಾರತ ವಾಣಿಜ್ಯದೃಷ್ಟಿಯಿಂದ ಅಮೆರಿಕಾದಿಂದ ಭಾರಿ ಲಾಭಪಡೆದುಕೊಂಡಿದೆ. ನಮಗೂ ಔಷಧಿ ಕಳುಹಿಸಬಾರದು ಎಂದು ನಿರ್ಧರಿಸಿದರೆ. ಅದನ್ನು ಅವರು ಮೊದಲೇ ಹೇಳಬೇಕಾಗಿತ್ತು. ಒಂದು ವೇಳೆ, ಅದು ಅವರ ಅವರ ನಿರ್ಧಾರವಾಗಿದ್ದರೆ, ಅಮೆರಿಕಾ ಪ್ರತೀಕಾರ ಕೈಗೊಳ್ಳದೆ ಸುಮ್ಮನೆ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಖಂಡಿತವಾಗಿ ಎದಿರೇಟು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಆದೇ ರೀತಿ ಕೊರೊನಾ ವಿರುದ್ದ ಸಮರದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ದೊಡ್ಡ ಗೇಮ್ ಚೇಂಜರ್ ಎಂದು ಟ್ರಂಪ್ ಬಣ್ಣಿಸಿದ್ದಾರೆ
ಭಾರತದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ಮಾರ್ಚ್ ೨೪ ರಂದು ಹೈಡ್ರಾಕ್ಸಿ ಕ್ಲೋರೊಕ್ವಿನ್ ರಫ್ತು ಮಾಡುವುದನ್ನು ನಿಷೇಧಿಸಿದೆ. ಆದರೆ, ಇದಕ್ಕೂ ಮೊದಲೆ ಅಮೆರಿಕಾ ಈ ಔಷಧಿ ಪೂರೈಸುವಂತೆ ಅಮೆರಿಕಾ ಆದೇಶಿಸಿತ್ತು. ಕೊರೊನಾದಿಂದಾಗಿ ಅಮೆರಿಕಾದಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ನಗರವೊಂದರಲ್ಲಿ ೪,೭೫೮ ಜನರು ಮೃತಪಟ್ಟಿದ್ದಾರೆ. ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಹಂತದಲ್ಲಿ ಭಾರತ ನೀಡುವ ನೆರವು ಅಮೆರಿಕಕ್ಕೆ ಹೆಚ್ಚಿನ ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಕರು ಭಾವಿಸಿದ್ದಾರೆ. ಭಾರತದ ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕಾಗೆ ಕ್ಲೋರೊಕ್ವಿನ್ ರಫ್ತು ಮಾಡಬೇಕೆ, ಬೇಡವೇ..? ಎಂಬುದು ಚರ್ಚನೀಯ ಅಂಶವಾಗಿದೆ. ಕೊರೊನಾ ವಿರುದ್ಧದ ಸಮರದಲ್ಲಿ ಭಾರತಕ್ಕೆ ನೆರವಾಗಲು ಅಮೆರಿಕಾ ೨.೯ ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ನಿನ್ನೆ ಘೋಷಿಸಿದೆ.