ತಾತ್ಕಾಲಿಕ ಆಸ್ಪತ್ರೆಯಾಗಿ ರೂಪುಗೊಂಡ ಯುಎಸ್ ಓಪನ್ ಸ್ಥಳ

ನ್ಯೂಯಾರ್ಕ್ , ಮಾ 31 , ಬಿಲ್ಲಿ ಜೀನ್ ಕಿಂಗ್ ರಾಷ್ಟ್ರೀಯ ಟೆನಿಸ್ ಕೇಂದ್ರದ ಒಂದು ಭಾಗ ಮಂಗಳವಾರ 350 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯಾಗಿ ರೂಪಾಂತರಗೊಳ್ಳಲಿದೆ ಎಂದು ಅಮೆರಿಕ ಟೆನಸ್ ಸಂಸ್ಥೆ(ಯುಎಸ್ ಟಿಎ) ತಿಳಿಸಿದೆ. ನ್ಯೂಯಾರ್ಕ್ ನಗರದಲ್ಲಿ ಕೊರೊನಾ ವೈರಸ್ ಸೋಂಕು ಎಲ್ಲ ಸಂಪನ್ಮೂಲಗಳ ಮೇಲೆ ತೀವ್ರತರವಾದ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಯುಎಸ್ ಓಪನ್ ಮತ್ತು ಅಮೆರಿಕನ್ ಟೆನಿಸ್‌ನ ಕೇಂದ್ರವಾದ ಈ ಸ್ಥಳವನ್ನು ವೈದ್ಯಕೀಯ ಬಿಕ್ಕಟ್ಟಿನ ಮಧ್ಯೆ ಬಳಸಿಕೊಳ್ಳಲಾಗುತ್ತಿದ್ದು, ವೃತ್ತಿಪರ ಕ್ರೀಡೆಗಳನ್ನು ಹಠಾತ್ ಮತ್ತು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ.
ಟೆನಿಸ್ ಕೇಂದ್ರವನ್ನು ಹೊಂದಿರುವ ಅಮೆರಿಕ ಟೆನಿಸ್ ಸಂಸ್ಥೆಯ ವಕ್ತಾರ ಕ್ರಿಸ್ ವಾಡ್ಮೇಯರ್, ಈ ಸ್ಥಳದಲ್ಲಿ ಒಳಾಂಗಣ ಟೆನಿಸ್ ಸೌಲಭ್ಯವನ್ನು ಪರಿವರ್ತಿಸುವ ಕಾರ್ಯ ಮಂಗಳವಾರ ಆರಂಭವಾಗಲಿದೆ ಎಂದಿದ್ದಾರೆ. "ನಾವು ಸಹಾಯ ಮಾಡಲು ಇಲ್ಲಿದ್ದೇವೆ - ಇದರ ಬಗ್ಗೆ ಎರಡು ಮಾರ್ಗಗಳಿಲ್ಲ", ಎಂದಿರುವ ವಾಡ್ಮೇಯರ್, ನ್ಯೂಯಾರ್ಕ್ ನಮ್ಮ ಮನೆ, ನಾವೆಲ್ಲ ಒಟ್ಟಿಗೆ ಇದ್ದೇವೆ ಎಂದಿದ್ದಾರೆ.ನ್ಯೂಯಾರ್ಕ್ ಸಿಟಿ ತುರ್ತು ನಿರ್ವಹಣೆ (ಎನ್‌ವೈಸಿಇಎಂ) ಸೋಮವಾರ ಯುಎಸ್‌ಟಿಎಗೆ ತನ್ನ ಯೋಜನೆಗಳ ಕುರಿತು ಮಾಹಿತಿ ನೀಡಿತ್ತು. ಈ ಹಿಂದೆ ಸಂಸ್ಥೆಗೆ ಟೆನಿಸ್ ಕೇಂದ್ರವು ಸಹಾಯಕ ವೈದ್ಯಕೀಯ ಆರೈಕೆಯ ಸಂಭಾವ್ಯ ಸ್ಥಳವಾಗಿದೆ ಎಂದು ತಿಳಿಸಿತ್ತು.