ವಾಷಿಂಗ್ಟನ್, ಮೇ ೧೯, ವಿಶ್ವ ಆರೋಗ್ಯ ಸಭೆಯಿಂದ ತೈವಾನ್ ದೇಶವನ್ನು ಹೊರಗಿಟ್ಟಿರುವುದಕ್ಕೆ ಅಮೆರಿಕಾ ವಿದೇಶಾಂಗ ಇಲಾಖೆ ತನ್ನ ಅಸಮಧಾನ ವ್ಯಕ್ತಪಡಿಸಿದ್ದು, ಇದೊಂದು ರಾಜಕೀಯ ಪ್ರೇರಿತ ನಿರ್ಧಾರ ಎಂದು ಟೀಕಿಸಿದೆ.ಜನರ ಜೀವಗಳು ಅಪಾಯದಲ್ಲಿರುವಾಗ ರಾಜಕೀಯ ಮಾಡಬಾರದು, ವಿಶ್ವ ಆರೋಗ್ಯ ಸಂಸ್ಥೆಯಂತಹ ಬಹುಪಕ್ಷೀಯ ಸಂಸ್ಥೆಗಳು ತನ್ನ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಸೇವೆ ಸಲ್ಲಿಸುವ, ಘೋಷಿತ ಕಾರ್ಯಗಳನ್ನು ಮುಂದುವರಿಸುವ ಆಗತ್ಯವಿದೆ, ಜನರ ಜೀವ ಅಪಾಯದಲ್ಲಿರುವಾಗ ವಿಶ್ವ ಆರೋಗ್ಯ ಸಂಸ್ಥೆ ರಾಜಕಾರಣದಿಂದ ಹೊರಬರಬೇಕು ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ,
ಚೈನಾದ ಒತ್ತಡದಿಂದ ತೈವಾನ್ ದೇಶವನ್ನು ಈ ಸಭೆಗೆ ಆಹ್ವಾನಿಸಿಲ್ಲ. ಈ ನಿರ್ಧಾರ ವಿಶ್ವ ಆರೋಗ್ಯ ಸಂಸ್ಥೆಯ ವಿಶ್ವಸಾರ್ಹತೆಗೆ ದಕ್ಕೆ ತರಲಿದೆ. ವಿಶ್ವ ಆರೋಗ್ಯ ಸಭೆಯ ಪ್ರಕ್ರಿಯೆಗಳಲ್ಲಿ ತೈವಾನ್ ದೇಶವನ್ನು ಸೇರಿಸಿಕೊಳ್ಳುವ ಕಾನೂನಾತ್ಮಕ ಅಧಿಕಾರ ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೂಸ್ ಹೊಂದಿದ್ದರೂ, ಚೀನಾದ ಒತ್ತಡದಿಂದ ಅವರು ತೈವಾನ್ ದೇಶವನ್ನು ಸಭೆಗೆ ಅಹ್ವಾನಿಸಿಲ್ಲ ಎಂದು ದೂರಿದೆ.
ಮಹಾ ನಿರ್ದೇಶಕರ ವೀವೇಚನೆ ಹಾಗೂ ಸ್ವಾತಂತ್ರದ ಕೊರತೆಯಿಂದಾಗಿ, ಸಾಂಕ್ರಾಮಿಕ ರೋಗ ಕುರಿತ ತೈವಾನ್ ದೇಶ ಹೊಂದಿರುವ ವೈಜ್ಞಾನಿಕ ಪರಿಣಿತಿ ಜಗತ್ತಿನ ಜನರಿಗೆ ಲಭಿಸದಂತಾಗಿದೆ. ಜಗತ್ತಿಗೆ ಅತ್ಯಂತ ಅಗತ್ಯ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತನ್ನ ವಿಶ್ವಾಸಾರ್ಹತೆ ಹಾಗೂ ಪರಿಣಾಮಕತೆಯನ್ನು ಮತ್ತಷ್ಟು ಹಾನಿಮಾಡಿಕೊಂಡಿದೆ ದೂರಿದೆ.
ಕೋವಿಡ್ -೧೯ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಅತ್ಯಂತ ಯಶಸ್ವಿ ರಾಷ್ಟ್ರಗಳಲ್ಲಿ ಒಂದಾಗಿರುವ ತೈವಾನ್ , ಸಾಂಕ್ರಾಮಿಕ ನಿಯಂತ್ರಣದಲ್ಲಿ ವೈಜ್ಞಾನಿಕ ಪರಿಣತಿ ಹೊಂದಿದ್ದು ವಿಶ್ವ ಆರೋಗ್ಯ ಸಭೆಗೆ ಆಹ್ವಾನಿಸಿದ್ದರೆ ಅಮೂಲ್ಯ ವಿಚಾರಗಳನ್ನು ಹಂಚಿಕೊಳ್ಳಬಹುದಿತ್ತು ಎಂದು ವಿದೇಶಾಂಗ ಇಲಾಖೆ ಅಭಿಪ್ರಾಯಪಟ್ಟಿದೆ."ಚೀನಾದ ವುಹಾನ್ ಪ್ರಾಂತ್ಯದ ಸಮೀಪದಲ್ಲಿದ್ದರೂ, ಕೊರೊನಾ ಸಾಂಕ್ರಾಮಿಕ ತಡೆಗಟ್ಟುವ ವಿಶ್ವದ ಅತ್ಯಂತ ಯಶಸ್ವಿ ದೇಶವಾಗಿರುವ ತೈವಾನ್ ತನ್ನ ತಜ್ಞತೆಯನ್ನು ಜಾಗತಿಕ ವೇದಿಕೆಯಲ್ಲಿ ಹೇಳಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಅವಕಾಶ ಮಾಡಿಕೊಡಬೇಕಿತ್ತು ಎಂದು ಹೇಳಿದೆ.