ಲಕ್ನೋ, ನ 11 : ಉತ್ತರ ಪ್ರದೇಶದಲ್ಲಿ ಭಾನುವಾರ ಮಧ್ಯ ರಾತ್ರಿ ಸಂಭವಿಸಿದ ಪ್ರತ್ಯೇಕ ಐದು ರಸ್ತೆ ಅಪಘಾತಗಳಲ್ಲಿ ಕನಿಷ್ಟ 16 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೌತಮ್ ಬುದ್ಧ ನಗರ ಜಿಲ್ಲೆಯ ಪೂರ್ವ ವರ್ತುಲ ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟು, ಇತರ ನಾಲ್ವರು ಗಾಯಗೊಂಡಿದ್ದಾರೆ. ಹರಿಯಾಣದ ಬಲ್ಲಭಘಡದಲ್ಲಿ ನಡೆದ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಕುಟುಂಬ ಸದಸ್ಯರು ಕಾರಿನಲ್ಲಿ ನೊಯಿಡಾಗೆ ವಾಪಸ್ಸಾಗುತ್ತಿದ್ದಾಗ, ಸೈಟ್ -5 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಹಾಗೂ ಒಬ್ಬ ಪುರುಷ ಸೇರಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಬುಲಂದ್ ಶಹರ್ ಜಿಲ್ಲೆಯ ಸಿಕಂದರಾ ಪ್ರದೇಶದಲ್ಲಿ ಕಾರು ಹಾಗೂ ಸರಕು ಸರಂಜಾಮು ಸಾಗಿಸುವ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಅಪಘಾತಕ್ಕೀಡ ಕಾರು ಗ್ರೇಟರ್ ನೋಯಿಡಾ ನಿಂದ ಬರುತ್ತಿತ್ತು. ಮೃತರ ಗುರುತು ಇನ್ನೂ ಪತ್ತೆಹಚ್ಚಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೀರತ್ ನ ಕಂಕರ್ ಖೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಧಾನ ಮೇಲ್ಸೇತುವೆಯ ಮೇಲೆ ತೆರಳುತ್ತಿದ್ದ ಮದುವೆ ಮೆರವಣಿಗೆಯ ಮೇಲೆ ಅಚಾನಕ್ ಆಗಿ ಕಾರೊಂದು ಹರಿದ ಪರಿಣಾಮ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 16 ಮಂದಿ ಗಾಯಗೊಂಡಿದ್ದಾರೆ. ನತದೃಷ್ಟ ಕಾರು ಮೊದಲು ಮತ್ತೊಂದು ವಾಹನಕ್ಕೆ ಅಪ್ಪಳಿಸಿ, ನಂತರ ಮದುವೆ ದಿಬ್ಬಣದ ಮೇಲೆ ಹರಿದಿದೆ. ಮೃತಪಟ್ಟವರನ್ನು ಮುಝಾಫರ್ ನಗರ್ ವಾಸಿ ಸರೋಜ್ (50) ಬ್ರಹ್ಮಲತಾ(48) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ನಾಲ್ವರ ಪರಿಸ್ಥಿತಿ ಚಿಂತಾಜನಕವಾಗಿ ಎಂದು ಪೊಲೀಸ್ ಮೂಲಗಳು ಹೇಳಿವೆ ಆಗ್ರಾದಲ್ಲಿ ನಡೆದ ಇನ್ನೊಂದು ರಸ್ತೆ ಅಪಘಾತದಲ್ಲಿ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ. ಪ್ರತಾಪ್ ಪುರ ಪ್ರದೇಶದ ಆಲಿಘಡ ರಸ್ತೆಯಲ್ಲಿ ಸಹೋದರರು ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ, ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಗ್ರಾದ ಖಂಡೌಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಮತ್ತೊಂದು ರಸ್ತೆ ಅವಘಡದಲ್ಲಿ ಮಹಿಳೆ ಸೇರಿದಂತೆ ಇಬ್ಬರು ಅಸುನೀಗಿ, ಇತರ ಐವರು ಗಾಯಗೊಂಡಿದ್ದಾರೆ. ಕುಟುಂಬವೊಂದರ ಸದಸ್ಯರು ಮೂರು ಮೋಟಾರ್ ಸೈಕಲ್ ಗಳಲ್ಲಿ ತೆರಳುತ್ತಿದ್ದಾಗ ಟ್ರಕ್ ವೊಂದು ಅಪ್ಪಳಿಸಿದ ಪರಿಣಾಮ ಅಪಘಾತ ಸಂಭವಿಸಿದ್ದು, ಕುಟುಂಬದ ಕೆಲ ಸದಸ್ಯರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.