ಲಂಡನ್, ಏ ೧೦, ಮದ್ಯ ದೊರೆ, ಆರ್ಥಿಕ ಅಪರಾಧಿ ವಿಜಯ್ ಮಲ್ಯ ಅವರು ತಾತ್ಕಲಿಕವಾಗಿ ನಿಟ್ಟುಸಿರು ಬಿಡುವಂತಹ ಆದೇಶವನ್ನು ಬ್ರಿಟನ್ ನ್ಯಾಯಾಲಯವೊಂದು ಹೊರಡಿಸಿದೆ.
ಮಲ್ಯ ಅವರನ್ನು ದಿವಾಳಿಕೋರನೆಂದು ಪ್ರಕಟಿಸುವಂತೆ ಭಾರತೀಯ ಬ್ಯಾಂಕುಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯನ್ನು ಲಂಡನ್ ನ್ಯಾಯಾಲಯ ವಜಾಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.ವಿಜಯ್ ಮಲ್ಯ ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ ಸಾಲಗಳನ್ನು ಮರುಪಾವತಿ ಮಾಡದೆ ಸುಸ್ತಿದಾರರಾಗಿದ್ದು, ಸಾಲ ವಸೂಲಿ ಮಾಡಲು ಮಲ್ಯ ಅವರನ್ನು ದಿವಾಳಿಕೋರ ಎಂದು ಘೋಷಿಸುವಂತೆ ಭಾರತೀಯ ಬ್ಯಾಂಕುಗಳ ಒಕ್ಕೂಟ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಆರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೈಕೆಲ್ ಬ್ರಿಗ್ಸ್, ಭಾರತ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ ನಲ್ಲಿ ಮಲ್ಯ ಸಲ್ಲಿಸಿರುವ ಆರ್ಜಿಗಳ ಸಂಬಂಧ ತೀರ್ಪು ಬರುವವರೆಗೂ ಮಲ್ಯ ಅವರಿಗೆ ಕಾಲಾವಕಾಶ ನೀಡಬೇಕು ಎಂದು ತೀರ್ಪು ನೀಡಿದೆ. ಬ್ಯಾಂಕ್ ಸಾಲಗಳನ್ನು ಪೂರ್ಣವಾಗಿ ಪಾವತಿಸುವವರೆಗೂ ಸಮಯ ನೀಡಬೇಕು ಹೇಳಿರುವ ನ್ಯಾಯಾಲಯ ದಿವಾಳಿತನದ ಆದೇಶ ನೀಡಲು ನಿರಾಕರಿಸಿತು. ಈ ಸಮಯದಲ್ಲಿ ಇಂತಹ ಕ್ರಮಗಳ ತೆಗೆದುಕೊಳ್ಳುವುದರಿಂದ ಬ್ಯಾಂಕುಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ನ್ಯಾಯಮೂರ್ತಿ ಬ್ರಿಗ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋವಿಡ್ -೧೯ ಅನಿಶ್ಚಿತತೆಯ ಕಾರಣದಿಂದಾಗಿ ದಿನಾಂಕ ನಿಗದಿಪಡಿಸುವುದು ಕಷ್ಟ ಎಂದು ಹೇಳಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂನ್ ೧ ಕ್ಕೆ ನಿಗದಿ ಪಡಿಸಿದೆ.ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿರೂ ಸಾಲ ಮರುಪಾವತಿಸದೆ ಮಲ್ಯ ಲಂಡನ್‌ಗೆ ಪರಾರಿಯಾಗಿದ್ದಾರೆ. ಮಲ್ಯ ವಿರುದ್ದ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆಯಂತಹ ಗಂಭೀರ ಪ್ರಕರಣಗಳನ್ನು ದಾಖಲಿಸಿರುವ ಇಡಿ ಮತ್ತು ಸಿಬಿಐ, ಮದ್ಯದೊರೆಯ ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಅದೇ ರೀತಿ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ವಿಷಯ ಸಂಬಂಧ ಬ್ರಿಟನ್ ಹೈಕೋರ್ಟ್‌ನಲ್ಲಿ ತೀರ್ಪು ಬಾಕಿ ಉಳಿದುಕೊಂಡಿದೆ. ಮತ್ತೊಂದೆಡೆ, ತಾನು ಪಡೆದುಕೊಂಡಿರುವ ಸಾಲಗಳ ಪೈಕಿ ಶೇ. ೧೦೦ರಷ್ಟು ಪಾವತಿಸಲು ಸಿದ್ದನಾಗಿದ್ದು, ಅವಕಾಶ ನೀಡುವಂತೆ ಬ್ಯಾಂಕುಗಳಿಗೆ ಪದೇ ಪದೇ ಮನವಿ ಮಾಡುತ್ತಿರುವ ಮಲ್ಯ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಾದರೂ, ತಮ್ಮ ಮನವಿಯನ್ನು ಸ್ವೀಕರಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.