ಅಯೋಧ್ಯಾ, ಮಾ 06, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿರುವ ಉದ್ಧವ್ ಠಾಕ್ರೆ ಶತದಿನದ ಸಂಭ್ರಮ ಆಚರಿಸಲು ನಾಳೆ ಅಯೋಧ್ಯೆಗೆ ತೆರಳುತ್ತಿದ್ದಾರೆ. ರಾಮಜನ್ಮಭೂವಿಯಲ್ಲಿ ಶ್ರೀರಾಮ ದೇಗುಲಹಾಗೂ ಹನುಮಗಡ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲು ಉದ್ಧವ್ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರು ಶನಿವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ಪತ್ನಿ, ಮಗ, ಪಕ್ಷದ ಮುಖಂಡರು ಹಾಗೂ ಸಚಿವರ ಸಮೇತ ಅಯೋಧ್ಯೆಗೆ ತೆರಳಿ ಶ್ರೀರಾಮನ ಆಶೀರ್ವಾದ ಪಡೆಯಲಿದ್ದಾರೆ. ಅಲ್ಲದೆ ಮಹಾರಾಷ್ಟ್ರಕ್ಕೆ ಹಿಂದಿರುಗುವ ಮುನ್ನ ಸಂಜೆ ಸರಯೂ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಶಿವಸೇನೆಯ ನೂರಾರು ಕಾರ್ಯಕರ್ತರು ವಿಶೇಷ ರೈಲಿನ 18 ಬೋಗಿಗಳಲ್ಲಿ ಶುಕ್ರವಾರವೇ ಅಯೋಧ್ಯೆಯತ್ತ ಪ್ರಯಾಣ ಹೊರಟಿದ್ದಾರೆ. ಉದ್ಧವ್ ಠಾಕ್ರೆಯವರು 2019 ನವೆಂಬರ್ 28ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.