ಯು-ಕಾಟಾಪೂರ ಹಾವು ಕಡಿತ ತಡೆಗಟ್ಟುವಿಕೆ ಹಾಗೂ ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮ

ಯು-ಕಾಟಾಪೂರ ಹಾವು ಕಡಿತ ತಡೆಗಟ್ಟುವಿಕೆ ಹಾಗೂ ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮ U-Katapura Awareness Program on Snake Bite Prevention and Control

ಲೋಕದರ್ಶನ ವರದಿ

ಕೊಪ್ಪಳ  18:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ಕೊಪ್ಪಳ, ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿ ಹಾಗೂ ಗ್ರಾಮ ಮಂಚಾಯತ್ ಕಾರ್ಯಾಲಯ ಹಿರೇಖೇಡಾ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ರಂದು ಯು-ಕಾಟಾಪೂರ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಬಗ್ಗೆ ಜಾಗೃತಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ.ಮಾಧವಿ ಅವರು, ಹಾವು ಕಡಿತದಿಂದ ಉಂಟಾಗುವ ಸಾವು-ನೋವುಗಳನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ನಮ್ಮ ದೇಶ ಹಳ್ಳಿಗಳ ದೇಶ ಶೇ.70 ಕ್ಕಿಂತಲೂ ಹೆಚ್ಚು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ರೈತರು ಕೃಷಿ ಕೆಲಸ ಮಾಡುವಾಗ ಹಾವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಭಾರತದಲ್ಲಿ ಪ್ರಮುಖ 4 ವಿಷಕಾರಿ ಹಾವುಗಳಾದ ನಾಗರಹಾವು, ಕಟ್ಟಾವು, ಕೊಳಕುಮಂಡಲ ಹಾವು ಹಾಗೂ ಗರಗಸ ಮಂಡಲ ಹಾವು ಕಡಿತದಿಂದ ಶೇ.90 ರಷ್ಟು ಅಧಿಕ ಸಾವುಗಳಾಗುತ್ತವೆ. ಹಾಗಾಗಿ ಈ 4 ಹಾವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ನಾಗರಹಾವು ಬಿಟ್ಟು ಉಳಿದ 3 ವಿಷಕಾರಿ ಹಾವುಗಳು ರಾತ್ರಿವೇಳೆ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಹಾಗಾಗಿ ರಾತ್ರಿವೇಳೆ ಹೊರಗಡೆ ಹೋಗುವಾಗ ಟಾರ್ಚ್‌ ಬಳಸಬೇಕು ಹಾಗೂ  ಮನೆ ಅಂಗಳವನ್ನು ಇಲಿ ಹೆಗ್ಗಣಗಳಂತಹ ಹಾವುಗಳು ತಿನ್ನುವ ಜೀವಿಗಳಿಂದ ಮುಕ್ತವಾಗಿಸಬೇಕು ಎಂದು ಹೇಳಿದರು. 

ಮನೆಯಂಗಳ ಅಥವಾ ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ತಿರುಗಾಡುವ ಸ್ಥಳಗಳಲ್ಲಿ ಗಿಡಗಂಟಿಗಳನ್ನು ಕಡಿದು ಸ್ವಚ್ಚವಾಗಿಟ್ಟುಕೊಳ್ಳುವುದು ಹಾಗೂ ಹಾವುಗಳಿರುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವಾಗ ಶೂ ಗಳನ್ನು ಬಳಸುವುದು, ರಾತ್ರಿ ಮನೆಯ ಹೊರಗೆ ಹಾಗೂ ಹೊಲಗದ್ದೆಗಳಲ್ಲಿ ಮಲಗಬೇಕಾದಾಗ ನೆಲದಲ್ಲಿ ಮಲಗದೆ ಎತ್ತರ ಪ್ರದೇಶದ ಮಂಚ ಬಳಸುವುದು, ನೆಲದಲ್ಲಿ ಮಲಗಲೇ ಬೇಕೆಂದರೆ ಕಡ್ಡಾಯವಾಗಿ ಸೊಳ್ಳೆಪರದೆ ಬಳಸುವುದು ಹಾಗೂ ರೈತರು ಹೊಲದಲ್ಲಿ ದನ-ಕರುಗಳಿಗೆ ಮೇವು ಹಾಗೂ ಹಸಿಹುಲ್ಲು ಕೀಳುವಾಗ  ಕುಡುಗೋಲು ಬಳಸಬೇಕು. ಒಂದು ವೇಳೆ ಹಾವು ಕಚ್ಚಿದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ 40 ನಿಮಿಷದೊಳಗಾಗಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು.

ಹಾವು ಕಡೆದ ವ್ಯಕ್ತಿಯನ್ನು ಸಮಾಧಾನ ಪಡಿಸಿ, ಗಾಬರಿ ಪಡಿಸದೆ ಹಾವಿನಿಂದ ನಿಧಾನವಾಗಿ ದೂರ ಸರಿಯಿರಿ ಹಾಗೂ  ರಕ್ತಬಂಧಕ ಪಟ್ಟಿ ಕಟ್ಟಬೇಡಿ. ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಿ ಹಾಗೂ  ಗಾಯವನ್ನು ಕತ್ತರಿಸಬೇಡಿ ಮತ್ತು ಏನನ್ನೂ ಹಚ್ಚಬೇಡಿ. ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸಿ. ನಾಟಿ ಓಷಧ ಅಥವಾ ಅಸುರಕ್ಷಿತ ಚಿಕಿತ್ಸಾ ಪದ್ಧತಿಯನ್ನು ಅವಲಂಬಿಸಬೇಡಿ. ಒಟ್ಟಾರೆಯಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸುತ್ತ-ಮುತ್ತಲಿನ ಪ್ರದೇಶ ಸ್ವಚ್ಛತೆಯಿಂದ ಇಟ್ಟುಕೊಂಡು ಇದರ ಬಗ್ಗೆ ಇತರರಿಗೂ ಮಾಹಿತಿ ನೀಡಿ ಜಾಗೃತರಾಗಬೇಕೆಂದು ತಿಳಿಸಿದರು. 

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು  ಮಾತನಾಡಿ, ಬೇಸಿಗೆ ಸಮಯದಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳು ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಎಚ್‌ಪಿವಿ ಲಸಿಕೆ ಕುರಿತು ವಿವರವಾಗಿ ಮಾತನಾಡಿದರು. ಆರೋಗ್ಯ ನೀರೀಕ್ಷಣಾಧಿಕಾರಿ ರಮೇಶ ಅವರು ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕುರಿತು ಮಾತನಾಡಿದರು.  ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ನೂರಜಾನಬೇಗಂ, ಸಹಾಯಕ ಆರೋಗ್ಯಾಧಿಕಾರಿ ನಾಗರಾಜರೆಡ್ಡಿ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಗ್ರಾಮಪಂಚಾಯತಿಯ ಸಿಬ್ಬಂದಿಗಳು ಹಾಗೂ ಗ್ರಾಮದ ನಾಗರಿಕರು, ವಿದ್ಯಾರ್ಥಿಗಳು, ಭಾಗವಹಿಸಿದ್ದರು.