ನಾಳೆಯಿಂದ ನಾಂದೇಡ್ ಎಕ್ಸ್‌ಪ್ರೆಸ್‌ನಲ್ಲಿ ಎರಡು ಸಾಮಾನ್ಯ ದರ್ಜೆ ಹೆಚ್ಚುವರಿ ಬೋಗಿ

ರಾಯಚೂರು, ಜ 29 ಜನಸಾಮಾನ್ಯರ ಸಂಚಾರ ಒತ್ತಡ ತಗ್ಗಿಸಲು ರಾಯಚೂರು ಮಾರ್ಗವಾಗಿ ನಾಂದೇಡ್‌ನಿಂದ ಬೆಂಗಳೂರಿಗೆ ಸಂಚರಿಸುವ ನಾಂದೇಡ್ ಎಕ್ಸ್‌ಪ್ರೆಸ್‌ನಲ್ಲಿ ಎರಡು ಸಾಮಾನ್ಯ ದರ್ಜೆಯ ಹೆಚ್ಚುವರಿ ಬೋಗಿಗಳು ಜೋಡಿಸಲು ದಕ್ಷಿಣ - ಪಶ್ಚಿಮ ರೈಲ್ವೆ ವಲಯ ನಿರ್ಧರಿಸಿದೆ. ಪ್ರತಿನಿತ್ಯ ಕಲ್ಯಾಣ ಕರ್ನಾಟಕ ಭಾಗದಿಂದ ಬಡ ಜನತೆ, ಕೂಲಿಕಾರರು ಬೆಂಗಳೂರಿಗೆ ತೆರಳುತ್ತಿದ್ದು ಸಂಚಾರಕ್ಕೆ ತೊಂದರೆ ನಿವಾರಿಸಲು ರೈಲ್ವೇ ಸಲಹಾ ಸಮಿತಿ ಸದಸ್ಯರ ಬೇಡಿಕೆ ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗುಂತಕಲ್ ವಿಭಾಗೀಯ ಮಹಾ ಪ್ರಬಂಧಕ ಅಲೋಕ ತಿವಾರಿ ಆಸಕ್ತಿ ಮೇರೆಗೆ ಹೆಚ್ಚುವರಿಯಾಗಿ ಎರಡು ಸಾಮಾನ್ಯ ಬೋಗಿಗಳು ನಾಂದೇಡ್ ಎಕ್ಸ್‌ಪ್ರೆಸ್‌ಗೆ ಜೋಡಿಸಲು ನಿರ್ಧರಿಸಲಾಗಿದೆ. ಜನವರಿ 30 ರಿಂದ ನಾಂದೇಡ್‌ನಿಂದ ಬೆಂಗಳೂರಿಗೆ ತೆರಳುವ ರೈಲು ಸಂಖ್ಯೆ ೧೬೫೯೩ ಮತ್ತು ಬೆಂಗಳೂರಿನಿಂದ ನಾಂದೇಡ್‌ಗೆ ತೆರಳುವ ರೈಲು ಸಂಖ್ಯೆ ೧೬೫೯೪ ರಲ್ಲಿ ಈ ಸೇವೆ ಲಭ್ಯವಾಗಲಿದೆ.