ತುಮಕೂರು, ಏ.8,ತುಮಕೂರು ಜಿಲ್ಲಾದ್ಯಂತ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಹಾಯ ಕೋರಲು ಅನುಕೂಲವಾಗುವಂತೆ ತುಮಕೂರು ಜಿಲ್ಲಾ ಕಾಂಗ್ರೆಸ್ ಕಮಿಟಿ ಆರಂಭಿಸಿರುವ ಸಹಾಯವಾಣಿಗೆ ಇಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಚಾಲನೆ ನೀಡಿದರು. ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಇಂದು ಸಭೆ ನಡೆಸಿದ ಪರಮೇಶ್ವರ್ ಅವರು, ಈ ಬಗ್ಗೆ ಸಹಾಯವಾಣಿಯ ಬಗ್ಗೆ ಅರಿವು ಮೂಡಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಬೇಕು. ಈ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು.ತುಮಕೂರು ಭಾಗದಲ್ಲಿ ಬಡವರಿಗೆ ಊಟದ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ ಇತರೆ ತುರ್ತು ಪರಿಸ್ಥಿತಿ ಇದ್ದಲ್ಲಿ ಈ ಸಹಾಯವಾಣಿಗೆ ಕರೆ ಮಾಡಬಹುದು. ನಮ್ಮ ಕಾರ್ಯರ್ತರು ಯೋಧರಂತೆ ಕೆಲಸ ಮಾಡಲಿದ್ದಾರೆ. ಎಲ್ಲಿಯಾದರೂ ತುರ್ತು ಅಗತ್ಯವಿದ್ದರೆ 7019528070/8792243114 ಈ ಸಂಖ್ಯೆಗೆ ಕರೆ ಮಾಡಬಹುದು. ಪ್ರತಿಯೊಬ್ಬರು ಅಂತರ ಕಾಯ್ದುಕೊಳ್ಳಬೇಕು. ಯಾವುದೇ ರೋಗದ ಸಣ್ಣ ಲಕ್ಷಣವನ್ನು ನಿರ್ಲಕ್ಷಿಸದೇ ಕೊರೋನ ವಿರುದ್ಧ ಹೋರಾಟ ನಡೆಸೋಣ ಎಂದು ಕರೆ ನೀಡಿದರು.
ನ್ಯಾಷನಲ್ ಸ್ಕೂಲ್ ಆಫ್ ಯೂನಿಯನ್ ಇಂಡಿಯಾ (ಎನ್‌ಎಸ್‌ಯುಐ) ಹಾಗೂ ಸಿದ್ಧಾರ್ಥ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ತುಮಕೂರು ಹಾಗೂ ಕೊರಟಗೆರೆ ವ್ಯಾಪ್ತಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ.ಜಿ. ಪರಮೇಶ್ವರ್ ಅವರು ಬಡಜನರಿಗೆ ಆಹಾರ ವಿತರಣೆ ಮಾಡಿದರು. ಕೊರೋನ ಮಹಾಮಾರಿಯಿಂದಾಗಿ ಇಡೀ ದೇಶ ಲಾಕ್‌ಡೌನ್ ಆಗಿದೆ. ಬಡ ಜನರಿಗೆ ಊಟದ ವ್ಯವಸ್ಥೆ ಆಗುವುದು ಅನಿವಾರ್ಯವಾಗಿದೆ. ತುಮಕೂರಿನಲ್ಲಿ ಎನ್‌ಎಸ್‌ಯುಐನ ವತಿಯಿಂದ ಈ ಭಾಗದ ಬಡ ಕುಟುಂಬ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇಂದು ಡಾ.ಜಿ. ಪರಮೇಶ್ವರ ಅವರು ಆಹಾರ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಅಡುಗೆ ತಯಾರಿ ಕೆಲಸವನ್ನು ಪರಿಶೀಲನೆ ನಡೆಸಿದರು. ಪ್ರತಿನಿತ್ಯ ಸಾವಿರಾರು ಕುಟುಂಬಗಳಿಗೆ ಎನ್‌ಎಸ್‌ಯುಐ ತಂಡದಿಂದ ಊಟದ ವ್ಯವಸ್ಥೆ ಪೂರೈಕೆ ಮಾಡಲಾಗುತ್ತಿದೆ. ಈ ಕೆಲಸ ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.