ವಾಷಿಂಗ್ಟನ್, ಫೆ 7,ಯೆಮನ್‌ನಲ್ಲಿ ಅಮೆರಿಕ ನಡೆಸಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಅರೇಬಿಯಾ ಪೆನಿನ್ಸುಲಾ(ಎಕ್ಯೂಎಪಿ)ದಲ್ಲಿ ಅಲ್-ಖೈದಾ ಸ್ಥಾಪಕ ಮತ್ತು ಸಂಘಟನೆಯ ನಾಯಕ ಖಾಸಿಮ್ ಅಲ್-ರಿಮಿ ಹತನಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ‘ಯೆಮನ್‌ನಲ್ಲಿ ಅಮೆರಿಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಅರೇಬಿಯನ್ ಪೆನಿನ್ಸುಲಾ (ಎಕ್ಯೂಎಪಿ)ದಲ್ಲಿ ಅಲ್- ಖೈದಾ ಸ್ಥಾಪಕ ಮತ್ತು ನಾಯಕ ಹಾಗೂ ಅಲ್-ಖೈದಾ ನಾಯಕ ಅಯ್ಮಾನ್ ಅಲ್ ಜವಹಿರಿ ಸಹಾಯಕ ಖಾಸಿಮ್ ಅಲ್-ರಿಮಿಯನ್ನು ಹತ್ಯೆ ಮಾಡಲಾಗಿದೆ ಎಂದು ಟ್ರಂಪ್ ಪ್ರಕಟಿಸಿದ್ದಾರೆ ಎಂದು ಶ್ವೇತಭವನ ಗುರುವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. 1990 ರ ದಶಕದಲ್ಲಿ ಅಲ್-ಖೈದಾಗೆ ಸೇರಿದ ಅಲ್-ರಿಮಿ, 2011 ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಯಿಂದ ಹತ್ಯೆಯಾದ ಅಲ್-ಖೈದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್ ಗಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಿಕೆ ತಿಳಿಸಿದೆ. ಯೆಮನ್‌ನಲ್ಲಿ ನಾಗರಿಕರ ವಿರುದ್ಧದ ಹಿಂಸಾಚಾರಗಳನ್ನು ಅಲ್-ರಿಮಿ ರೂಪಿಸುತ್ತಿದ್ದ. ಅಲ್ಲದೆ, ಅಮೆರಿಕ ಮತ್ತು ಅಮೆರಿಕ ಪಡೆಗಳ ವಿರುದ್ಧ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ. ಅಲ್-ರಿಮಿ ಹತ್ಯೆಯಿಂದ ಅಲ್-ಖೈದಾ ಜಾಗತಿಕವಾಗಿ ಬೆಳೆಯುವುದಕ್ಕೆ ಹೊಡೆತ ಬಿದ್ದಿದೆ.
ಜನವರಿ ಅಂತ್ಯದಲ್ಲಿ ಅಮೆರಿಕ ಡ್ರೋನ್ ದಾಳಿಯಲ್ಲಿ ಅಲ್-ರಿಮಿ ಹತ್ಯೆಯಾಗಿದ್ದಾನೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಪರಿಚಿತ ವ್ಯಕ್ತಿಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅಮೆರಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿ ದಾಳಿ ಸಂಚುಗಳನ್ನು ರೂಪಿಸಿದ್ದ ಅಲ್-ರಿಮಿ ಯನ್ನು ಸೆರೆಹಿಡಿಯಲು ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕ ವಿದೇಶಾಂಗ ಸಚಿವಾಲಯ 10 ದಶಲಕ್ಷ ಬಹುಮಾನ ಘೋಷಿಸಿತ್ತು.